ಸಾಮಾಜಿಕ ಜಾಲತಾಣಗಳ ಬಳಕೆಯಂತೆ ಕೃತಕ ಬುದ್ಧಿಮತ್ತೆಯೂ (ಎಐ) ದಿನನಿತ್ಯದ ಬದುಕಿನಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಮಾಹಿತಿಯ ಹುಡುಕಾಟಕ್ಕೆ, ಚಿತ್ರಕ್ಕಾಗಿ, ವಿಡಿಯೊಗಳ ರಚನೆಗೆ.. ಹೀಗೆ ಹಂತ ಹಂತದಲ್ಲೂ ಎಐ ಅನ್ನೇ ನೆಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಎಐ ಬಳಕೆ ಹೆಚ್ಚಾದ ಕಾರಣ ಕಳೆದ ಕೆಲವು ವರ್ಷಗಳಿಂದ ಹಲವು ಕಂಪನಿಗಳು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಡೇಟಾ ಸೆಂಟರ್ಗಳನ್ನು ಸ್ಥಾಪಿಸಿವೆ. ಈ ಡೇಟಾ ಸೆಂಟರ್ಗಳು ವಿದ್ಯುತ್ ಮತ್ತು ನೀರನ್ನು ಅಪಾರ ಪ್ರಮಾಣದಲ್ಲಿ ಬಳಕೆ ಮಾಡುತ್ತವೆ ಎನ್ನುವುದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ಈ ಸೆಂಟರ್ಗಳು ಸುತ್ತಮುತ್ತಲಿನ ಪ್ರದೇಶದ ತಾಪಮಾನದ ಏರಿಕೆಗೂ ಕಾರಣವಾಗುತ್ತಿದೆ. ಸರ್ವರ್ಗಳಿಂದ ಹೊರಬರುವ ಬಿಸಿ ಗಾಳಿಯು ಸ್ಥಳೀಯ ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತದೆ.
6 ಸಾವಿರಕ್ಕೂ ಹೆಚ್ಚು ಡೇಟಾ ಸೆಂಟರ್ಗಳನ್ನು ಆಧರಿಸಿ ಬ್ರಿಟನ್ನಲ್ಲಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಅರ್ಥ್ ಅಬ್ಸ್ರ್ವೇಷನ್ ಗ್ರೂಪ್ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಲೇಖಕಿ ಆಂಡ್ರಿಯಾ ಮರಿನೋನಿ ಅಧ್ಯಯನ ನಡೆಸಿದ್ದಾರೆ.
ಅಧ್ಯಯನದ ಪ್ರಕಾರ, ಎಐ ಡೇಟಾ ಸೆಂಟರ್ಗಳ ಕಾರ್ಯಾಚರಣೆ ಪ್ರಾರಂಭವಾದ ನಂತರ ಸ್ಥಳೀಯ ಸೂಕ್ಷ್ಮ ಹವಾಮಾನ ವಲಯಗಳು ಸೇರಿ ಭೂಮಿಯ ಮೇಲ್ಮೈ ತಾಪಮಾನ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತಿದೆ. ವಿಪರೀತ ಸಂದರ್ಭದಲ್ಲಿ ಈ ತಾಪಮಾನದ ಪ್ರಮಾಣ 9 ಡಿಗ್ರಿ ಸೆಲ್ಸಿಯಸ್ನಷ್ಟೂ ಏರಿಕೆಯಾಗುತ್ತದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ಕಂಡುಬರುವ 'ಅರ್ಬನ್ ಹೀಟ್ ಐಲ್ಯಾಂಡ್' ಪರಿಣಾಮದಂತೆಯೇ, ಈ ಡೇಟಾ ಸೆಂಟರ್ಗಳು ಸ್ಥಳೀಯವಾಗಿ ಶಾಖದ ದ್ವೀಪಗಳನ್ನು ಸೃಷ್ಟಿಸುತ್ತಿವೆ. ಇದು ಸುಮಾರು 10 ಕಿ.ಮೀ ವ್ಯಾಪ್ತಿಯವರೆಗೂ ತಾಪಮಾನದ ಏರಿಕೆಗೂ ಕಾರಣವಾಗುತ್ತಿದೆ ಎನ್ನುತ್ತಿದೆ ವರದಿ.
34 ಕೋಟಿ ಜನರ ಮೇಲೆ ಪರಿಣಾಮ
ಜಗತ್ತಿನಾದ್ಯಂತ ಸುಮಾರು 34 ಕೋಟಿಗೂ ಹೆಚ್ಚು ಜನರು ಈ ಡೇಟಾ ಸೆಂಟರ್ಗಳ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಅವರು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಬದುಕುವಂತಾಗಿದೆ. ಇದು ಅವರ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಡೇಟಾ ಸೆಂಟರ್ಗಳ ನೀರಿನ ದಾಹ
ನಾವು ಬಳಸುವ ಇ-ಮೇಲ್, ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತು ಎಐ ಆಧಾರಿತ ಕೆಲಸಗಳ ಸಂಭಾಷಣೆಗಳು ಡೇಟಾ ಸೆಂಟರ್ಗಳ ಸರ್ವರ್ ಮೂಲಕ ಹಾದುಹೋಗುತ್ತವೆ. ಲೆಕ್ಕಾಚಾರದ ಪ್ರಕಾರ, ಸರಾಸರಿ 100 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ವಹಣೆಗೆ ಸುಮಾರು 30 ಲಕ್ಷ ಲೀಟರ್ ನೀರು ಬೇಕು. ಇಷ್ಟು ನೀರನ್ನು ಬೆಂಗಳೂರಿನ 15,000 ಕುಟುಂಬಗಳು ಪ್ರತಿನಿತ್ಯ ಬಳಸುತ್ತವೆ. ಇದೇ ನೀರು ಗಂಗಾವತಿ ನಗರದ 40,000 ಜನರಿಗೆ ಸಾಕಾಗುತ್ತದೆ. ಇದೇ ಡೇಟಾ ಸೆಂಟರ್ ವರ್ಷಕ್ಕೆ ಬಳಸುವ ನೀರು ಸಾಧಾರಣ ನಗರದ ಒಂದು ಲಕ್ಷ ಜನರ ವಾರ್ಷಿಕ ಅಗತ್ಯವನ್ನು ಪೂರೈಸಬಲ್ಲದು. ಜಾಗತಿಕವಾಗಿ, ಡೇಟಾ ಸೆಂಟರ್ಗಳು ಒಂದು ವರ್ಷದ ಅವಧಿಯಲ್ಲಿ ಬಳಸುವ (560 ಶತಕೋಟಿ ಲೀಟರ್) ನೀರಿನಿಂದ 200 ಎಕರೆ ಜಮೀನಿನಲ್ಲಿ ಭರಪೂರ ಭತ್ತದ ಬೆಳೆ ತೆಗೆಯಬಹುದು! ಎಐ ಬಳಕೆಯಿಂದ ನಿಮಿಷಕ್ಕೆ ಸುಮಾರು 10 ಲಕ್ಷ ಲೀಟರ್ ನೀರು ಆವಿಯಾಗುತ್ತಿದೆ.

