ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ದಿನದಿಂದ ದಿನಕ್ಕೆ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ, ಅಮೆರಿಕ ಹಾಗೂ ಇರಾನ್ ಎದುರು ಕದನ ವಿರಾಮದ ಕುರಿತು ಪ್ರಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.
45 ದಿನಗಳ ಕದನ ವಿರಾಮ ಜಾರಿಗೊಳಿಸುವ ಸಂಬಂಧ ಪಾಕಿಸ್ತಾನವು ಕಾರ್ಯತಂತ್ರ ರೂಪಿಸಿದ್ದು ಆ ಕುರಿತ ಪ್ರಸ್ತಾವನೆಯನ್ನು ಎರಡೂ ರಾಷ್ಟ್ರಗಳ ಮುಂದಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮೊದಲ ಹಂತದಲ್ಲಿ ಯುದ್ಧವನ್ನು ಕೊನೆಗೊಳಿಸಲು ಸಮಗ್ರ ಒಪ್ಪಂದದ ಮಾತುಕತೆಗಳು ಮುಂದುವರಿಯುತ್ತವೆ. ಎರಡನೇ ಹಂತದಲ್ಲಿ ಶಾಶ್ವತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಅಮೆರಿಕ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇದರ ಮಧ್ಯೆ ಇಸ್ರೇಲ್ ಮತ್ತು ಅಮೆರಿಕ ನಡುವಿನ ಸೇನಾ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಗಲ್ಫ್ ಪ್ರದೇಶದ ಭದ್ರತೆಗೂ ಗಂಭೀರ ಸವಾಲು ಎದುರಾಗಿದೆ. ಜೊತೆಗೆ ಹಾರ್ಮುಜ್ ಜಲಸಂಧಿ ಭದ್ರತೆ, ತೈಲ ಸರಬರಾಜು ಸೇರಿದಂತೆ ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುತ್ತಿದೆ. ತೈಲ ಬೆಲೆಗಳ ಮೇಲಿನ ಹೆಚ್ಚಳ ಜಾಗತಿಕ ಆರ್ಥಿಕತೆ ಮೇಲೂ ಒತ್ತಡ ಹೆಚ್ಚಿಸಿದೆ.

