ನವದೆಹಲಿ: ಜನಗಣತಿಯ ಮೊದಲ ಹಂತದಲ್ಲಿ ಈವರೆಗೆ 5.72 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಗಣತಿ ಸೌಲಭ್ಯ ಪಡೆದುಕೊಂಡಿವೆ ಎಂದು ಭಾರತೀಯ ನೋಂದಣಿಯ ಮಹಾ ನಿರ್ದೇಶನಾಲಯದ (ಆರ್‌ಜಿಐ) ತಿಳಿಸಿದೆ.
ಈ ಬಗ್ಗೆ ಆರ್‌ಜಿಐ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಜನಗಣತಿಯ ಮೊದಲ ಹಂತದಲ್ಲಿ 5.72 ಲಕ್ಷ ಕುಟುಂಬಗಳು ಸ್ವಯಂ ಗಣತಿಯಲ್ಲಿ ಭಾಗವಹಿಸಿದ್ದು ಇದು ಜನಗಣತಿಯ ಡಿಜಿಟಲ್ ಉಪಕ್ರಮದಲ್ಲಿ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಜನರು ತಮ್ಮ ವಿವರಗಳನ್ನು ಡಿಜಿಟಲ್ ರೂಪದಲ್ಲಿ ನೀಡಿ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಅದು ತಿಳಿಸಿದೆ.
ನಾಗರಿಕರಿಗೆ ಸ್ವಯಂ ಗಣತಿಗಾಗಿ ಅಭಿವೃದ್ಧಿಪಡಿಸಿದ ಪೋರ್ಟಲ್‌ನಲ್ಲಿ ಪಟ್ಟಿ ಮಾಡಿದ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮಾಹಿತಿ ಒದಗಿಸುವುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ನಾಗರಿಕರು ವಿಶೇಷ ಐಡಿಯನ್ನು ಪಡೆದುಕೊಳ್ಳುತ್ತಾರೆ.
ಸ್ವಯಂ ಜನಗಣತಿಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲ ನಾಗರಿಕರಿಗೂ ಲಭ್ಯವಿದೆ. ಗಣತಿದಾರರು ಏಪ್ರಿಲ್ 16ರಿಂದ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿಯನ್ನು (ಎಚ್‌ಎಲ್‌ಒ) ಮಾಡಲಿದ್ದಾರೆ.
ಸ್ವಯಂ ಗಣತಿ ಸೌಲಭ್ಯ ಪಡೆದುಕೊಂಡವರು ಮನೆಗೆ ಬರುವ ಗಣತಿದಾರರಿಗೆ(ಎಚ್‌ಎಲ್‌ಒ) ಮಾಹಿತಿ ನೀಡಬೇಕು ಎಂದು ಆರ್‌ಜಿಎ ತಿಳಿಸಿದೆ.

