ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿರುವ ಭಾರತೀಯ ಚುನಾವಣಾ ಆಯೋಗವು (Election commission of India), ಇತ್ತೀಚೆಗೆ ನಡೆಸಿದ ದ್ವಿತೀಯ ಹಂತದ ವಿಶೇಷ ಪರಿಷ್ಕರಣಾ ಅಭಿಯಾನವನ್ನು (SIR) ಯಶಸ್ವಿಯಾಗಿ ಪೂರೈಸಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಕ್ರಮ ಅಥವಾ ಅನಗತ್ಯ ಎನ್ನಲಾದ 5.18 ಕೋಟಿ ಮತದಾರರ (Voters) ಗುರುತನ್ನು ಪಟ್ಟಿಯಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ.
ಈ ಪೈಕಿ ವಾಸಸ್ಥಳ ಬದಲಾವಣೆ ಮಾಡಿದ 3.1 ಕೋಟಿ ಮಂದಿ ಹಾಗೂ ಮರಣ ಹೊಂದಿದ 66 ಲಕ್ಷ ಜನರ ಹೆಸರುಗಳು ಪ್ರಮುಖವಾಗಿವೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 2.04 ಕೋಟಿ ಹೆಸರುಗಳು ರದ್ದಾಗಿದ್ದು, ಬಂಗಾಳ ಮತ್ತು ತಮಿಳುನಾಡಿನಲ್ಲೂ ಲಕ್ಷಾಂತರ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಒಂದು ಕಡೆ ನಕಲಿ ಮತದಾರರನ್ನು ತೆಗೆಯಲಾಗಿದ್ದರೆ, ಮತ್ತೊಂದೆಡೆ ಸುಮಾರು 2 ಕೋಟಿ ಹೊಸಬರು ಪಟ್ಟಿಗೆ ಸೇರ್ಪಡೆಗೊಂಡಿರುವುದು ವಿಶೇಷ.
ಈ ಪ್ರಕ್ರಿಯೆಯಲ್ಲಿ ಪ್ರಸ್ತುತ ಎರಡು ಹಂತಗಳು ಮುಕ್ತಾಯವಾಗಿದ್ದು, ಮುಂದಿನ ಹಂತದ ಕಾರ್ಯಚರಣೆಯು ಕರ್ನಾಟಕ ಸೇರಿದಂತೆ ಒಟ್ಟು 17 ರಾಜ್ಯಗಳಲ್ಲಿ ಪ್ರಾರಂಭವಾಗಲಿದೆ. ಈ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

