ಇಸ್ಲಾಮಾಬಾದ್: ಇಂಧನ ಬೆಲೆಯಲ್ಲಿ ತೀವ್ರ ಏರಿಕೆಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯಲ್ಲಿ 80 ಪಾಕಿಸ್ತಾನಿ ರೂಪಾಯಿ ಕಡಿತ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನಿ ಶೆಹಬಾಜ್ ಷರೀಫ್, 'ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ 80 ಪಾಕಿಸ್ತಾನಿ ರೂಪಾಯಿ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.
ಇದರಿಂದಾಗಿ ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್ 378 ಪಾಕಿಸ್ತಾನಿ ರೂಪಾಯಿಗಳಿಗೆ ಲಭ್ಯವಾಗಲಿದೆ' ಎಂದು ತಿಳಿಸಿದ್ದಾರೆ.
ಪರಿಷ್ಕೃತ ದರವು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, ದೇಶಾದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಈ ದರ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಗುರುವಾರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ 105 ಪಾಕಿಸ್ತಾನಿ ರೂಪಾಯಿಂದ 160ಕ್ಕೆ ಏರಿಸಿದ್ದರಿಂದ ಪೆಟ್ರೋಲ್ ಬೆಲೆಯು 321ರಿಂದ 458 ಪಾಕಿಸ್ತಾನಿ ರೂಪಾಯಿಗೆ ಏರಿಕೆಯಾಗಿತ್ತು.
ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 184.49 ಪಾಕಿಸ್ತಾನಿ ರೂಪಾಯಿ ಹೆಚ್ಚಿಸಿತ್ತಾದರೂ, ಅದರ ಮೇಲಿನ ತೆರಿಗೆಯನ್ನು ರದ್ದುಗೊಳಿಸಿತ್ತು.
ಕೊಲ್ಲಿ ರಾಷ್ಟ್ರಗಳಲ್ಲಿನ ಪರಿಸ್ಥಿತಿಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣ ಎಂದು ಸರ್ಕಾರ ತಿಳಿಸಿತ್ತು.

