ನವದೆಹಲಿ: ವೇತನ ಆಯೋಗದ ಶಿಫಾರಸಿನ ಮೇಲೆ, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ವೇತನ ಹಾಗೂ ಪಿಂಚಣಿ ಹೆಚ್ಚಳ ಮಾಡಲು ನಿರ್ಧರಿಸಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 8ನೇ ವೇತನ ಆಯೋಗವನ್ನು ಕಳೆದ ವರ್ಷ ರಚನೆ ಮಾಡಿದ್ದರು. ನೌಕರರ ವಿವಿಧ ಸಂಘಟನೆಗಳು ವೇತನ, ಭತ್ಯೆ ಹೆಚ್ಚಳ ಹಾಗೂ ಒಟ್ಟಾರೆ ವೇತನ ಸಂರಚನೆಯ ಬದಲಾವಣೆಗಾಗಿ ಆಯೋಗಕ್ಕೆ ಮನವಿ ಸಲ್ಲಿಸಿದ್ದವು.
ಸಂಘಟನೆಗಳ ಸಲಹೆ ಸೂಚನೆಗಳನ್ನು ಪುರಸ್ಕರಿಸಿದ ಆಯೋಗ ಹಲವು ಬದಲಾವಣೆಗಳನ್ನು ಸೂಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
8ನೇ ವೇತನ ಆಯೋಗ ಕೇಂದ್ರದಿಂದ ಅನುಮೋದನೆಗೊಂಡರೆ ಇದೇ ವರ್ಷ ಜನವರಿ 2026ರಿಂದ 8ನೇ ವೇತನ ಆಯೋಗ ಜಾರಿಯಾಗಲಿದೆ. ಹಿಂದಿನ ತಿಂಗಳುಗಳ ಬಾಕಿಯನ್ನು ನೌಕರರಿಗೆ ಪಾವತಿಸಲಾಗುವುದು.
ಏನೇನು ಬದಲಾಗುತ್ತದೆ?
* ಮೂಲ ವೇತನ ಪರಿಷ್ಕರಣೆ
* ಒಟ್ಟಾರೆ ವೇತನ ಸಂರಚನೆಯಲ್ಲಿ ಬದಲಾವಣೆ
* ಭತ್ಯೆ ಮತ್ತು ಪಿಂಚಣಿಗಳ ಹೆಚ್ಚಳ
ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಮತ್ತು ಪಿಂಚಣಿಯನ್ನು ಪರಿಷ್ಕೃತ ಮೂಲ ವೇತನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಫಿಟ್ಮೆಂಟ್ ಫ್ಯಾಕ್ಟರ್‌ಗೆ ಮನವಿ...
ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಸಂಘಟನೆಯಾದ ಜೆಸಿಎಂ ಸಂಘವು ಶೇ 3.83ರಷ್ಟು ಫಿಟ್ಮೆಂಟ್ ಫ್ಯಾಕ್ಟರ್ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಪಡೆಯುತ್ತಿರುವ ಮೂಲ ವೇತನಕ್ಕೆ ಶೇ 3.83 ಅನ್ನು ಗುಣಿಸುವುದೇ ಫಿಟ್ಮೆಂಟ್ ಫ್ಯಾಕ್ಟರ್ ಆಗಿದೆ.
ಕನಿಷ್ಠ ವೇತನ ₹ 69 ಸಾವಿರಕ್ಕೆ ಬೇಡಿಕೆ...
ನೌಕರರ ಸಂಘಟನೆಗಳು ಮೂಲ ವೇತನವನ್ನು ₹ 69 ಸಾವಿರಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿವೆ. ಹಣದುಬ್ಬರ, ವಸತಿ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಮೂಲ ವೇತನವನ್ನು ಹೆಚ್ಚಿಸಬೇಕು ಎಂದು ಸಂಘಟನೆಗಳು ಬೇಡಿಕೆ ಸಲ್ಲಿಸಿವೆ.
ಕನಿಷ್ಠ ಮೂಲ ವೇತನವನ್ನು ₹ 18 ಸಾವಿರದಿಂದ 69 ಸಾವಿರಕ್ಕೆ ಹೆಚ್ಚಿಸಲು ಒತ್ತಾಯಿಸಿರುವುದನ್ನು ಸರ್ಕಾರ ಒಪ್ಪುತ್ತದೆಯೇ ಎಂಬುದು ಬೇರೆ ಮಾತು.
ಈ ಉದ್ದೇಶಿತ ವೇತನ ವೇತನ ಆಯೋಗ ಜಾರಿಯನ್ನು ಅಂತಿಮವಾಗಿ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ.

