ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ, ಪಕ್ಷಪಾತ ಮತ್ತು ಬಲವಂತ ನಡೆದಿರುವ ಬಗ್ಗೆ ಬಾಂಗ್ಲಾದೇಶ ಸರಕಾರದ ತನಿಖಾ ಸಮಿತಿಯೊಂದು ಪುರಾವೆಗಳನ್ನು ಸಂಗ್ರಹಿಸಿದೆ.
ಮಾಜಿ ನ್ಯಾಯಾಧೀಶ ಎ.ಕೆ.ಎಮ್. ಅಸಾದುಝಮಾನ್ ನೇತೃತ್ವದ ಐವರು ಸದಸ್ಯರ ಸಮಿತಿಯೊಂದು ತನ್ನ ವರದಿಯನ್ನು ರವಿವಾರ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿದೆ. ಬಿಸಿಬಿಯ ಉನ್ನತ ಅಧಿಕಾರಿಗಳು ತನಿಖೆಗೆ ಸಹಕಾರ ನೀಡಿಲ್ಲ ಎಂಬುದಾಗಿಯೂ ಸಮಿತಿ ಆರೋಪಿಸಿದೆ.
ಬಿಸಿಬಿ ಅಧಿಕಾರಿಗಳು ಮತ್ತು ಕ್ರೀಡಾ ಸಚಿವಾಲಯದಲ್ಲಿರುವ ವ್ಯಕ್ತಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರಗಳಲ್ಲಿ ಶಾಮೀಲಾಗಿದ್ದಾರೆ ಎಂದು ಸಮಿತಿ ಹೇಳಿದೆ.
ಎನ್‌ಎಸ್‌ಸಿ ಕ್ರೀಡಾ ನಿರ್ದೇಶಕ ಮುಹಮ್ಮದ್ ಅಮೀನುಲ್ ಎಹಸಾನ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸರಕಾರದ ವರದಿಯನ್ನು ಓದಿ ಹೇಳಿದರು.
ಅಮೀನುಲ್ ನೇತೃತ್ವದ ಬಿಸಿಬಿ ಮಂಡಳಿಯನ್ನು ವಿಸರ್ಜಿಸಲು ಸಾಕಷ್ಟು ಆಧಾರಗಳಿವೆ ಎಂದು ಎಹಸಾನ್ ಹೇಳಿದರು. ಹನ್ನೊಂದು ಸದಸ್ಯರ ನೂತನ ವಿಶೇಷ ಸಮಿತಿಯೊಂದು ಮುಂದಿನ ಮೂರು ತಿಂಗಳ ಕಾಲ ಬಿಸಿಬಿಯ ಆಡಳಿತವನ್ನು ನೋಡಿಕೊಳ್ಳುತ್ತದೆ ಎಂದು ಅವರು ಪ್ರಕಟಿಸಿದರು.
ನೂತನ ವಿಶೇಷ ಸಮಿತಿಯ ಅಧ್ಯಕ್ಷರಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್‌ರನ್ನು ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅಮೀನುಲ್ ಬಿಸಿಬಿ ಅಧ್ಯಕ್ಷರಾಗಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಾಗಿ ಚುನಾವಣೆ ನಡೆಯುವ ನಾಲ್ಕು ವಾರಗಳ ಮೊದಲು ತಮೀಮ್ ಆರೋಪಿಸಿದ್ದರು.

