ಕುಂಬಳೆ: ಸ್ವಪ್ರತಿಷ್ಠೆ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವಂಥದ್ದು. ಕಲಾರಂಗದಲ್ಲಿ ಅದು ಸ್ವಲ್ಪ ಹೆಚ್ಚು ಅಂದರೆ ತಪ್ಪಾಗಲಾರದು. ಅದರಲ್ಲೂ ವಿಶಿಷ್ಟವಾದ ಹುದ್ದೆಯಲ್ಲಿದ್ದವರಾದರೆ ಇನ್ನೂ ವಿಭಿನ್ನ. ಆದರೆ ಕೇಶವ ಭಟ್ ಕಂಬಾರು ಅವರು ಬ್ಯಾಂಕಿನ ಹಿರಿಯ ಅಧಿಕಾರಿಯಾಗಿದ್ದೂ ಅತ್ಯಪೂರ್ವ ಕಲಾವಿದರಾಗಿ, ಕಲಾಸಾಧಕರಾಗಿ ಹಾಗೂ ಗುರುವಾಗಿ ಸಮಾಜದಲ್ಲಿ ಬೆರೆದವರು ಎಂದು ಕಾಸರಗೋಡು ನೆಯ್ಗೆ ಕಾರ್ಮಿಕರ ಸಹಕಾರಿ ಸಂಘದ ನಿವೃತ್ತ ಪ್ರಬಂಧಕ ಸದಾಶಿವ ಗಟ್ಟಿ ನಾಯ್ಕಾಪು ನುಡಿದರು.
ಕುಂಬಳೆ ಶ್ರೀಧರ ರಾಯರಂಥ ಮೇರು ಕಲಾವಿದರು ಕಟ್ಟಿಬೆಳೆಸಿ ಒಂದಷ್ಟು ಮಂದಿ ಪ್ರಸಿದ್ಧ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ಕೊಟ್ಟು ಸುವರ್ಣಮಹೋತ್ಸವವನ್ನು ದಾಟಿ ಮುಂದುವರಿಯುತ್ತಿರುವ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘದ ಆಶ್ರಯದಾತ ಕಂಬಾರು ಕೇಶವ ಭಟ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸ್ವಂತ ಕಟ್ಟಡ ಇಲ್ಲದೆ ಸಂಘ ಮುಂದುವರಿಯುವುದು ಹೇಗೆ ಎಂಬ ಪ್ರಶ್ನೆ ಮುಂದಾದಾಗ ತನ್ನ ಮನೆಯನ್ನೇ ಈ ಸಂಘದ ಕಾರ್ಯಾಲಯವಾಗಿ ಮಾಡಿ, ಕಾರ್ಯದರ್ಶಿಯಾಗಿ ನಿರಂತರ ವಾರದ ಕೂಟಗಳನ್ನು ನಡೆಸುತ್ತಾ ಬಂದುದಲ್ಲದೆ ಪ್ರತಿಬಾರಿಯೂ ಕಲಾವಿದರಿಗೂ ಕಲಾಭಿಮಾನಿಗಳಿಗೂ ಸಮೃದ್ಧ ಉಪಾಹಾರದ ವ್ಯವಸ್ಥೆಯನ್ನೂ ಮಾಡಿದವರು ಕಂಬಾರು ಕೇಶವ ಭಟ್ಟರು.
ಇದೀಗ ಅನಿವರ್ಯವಾಗಿ ತಮ್ಮ ನಿವಾಸವನ್ನು ಉಡುಪಿ ಜಿಲ್ಲೆಯ ಬಾರ್ಕೂರಿಗೆ ವರ್ಗಾಯಿಸುವ ಸಂದರ್ಭದಲ್ಲಿ ಸಂಘದ ಸದಸ್ಯರು ಮತ್ತು ಅವರ ಅಭಿಮಾನಿಗಳಿಂದ ಸನ್ಮಾನ ಸಮಾರಂಭ ನಡೆಯಿತು. ಸ್ಮರಣಿಕೆ, ಮಾನಪತ್ರ, ಫಲಪುಷ್ಪ ನೀಡಿ ಶಾಲು ಹೊದೆಸಿ ಅವರನ್ನು ಸನ್ಮಾನಿಸಲಾಯಿತು. ಡಾ. ಬೇಸೀ ಗೋಪಾಲಕೃಷ್ಣ ಭಟ್ ಮಾನಪತ್ರವನ್ನು ವಾಚಿಸಿದರು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಸೂರಂಬೈಲು ಸ್ವಾಗತಿಸಿ, ಮುರಳೀಧರ ಯಾದವ್ ವಂದಿಸಿದರು.
ಸನ್ಮಾನ ಸಮಾರಂಭದ ಬಳಿಕ ರಾಜಸೂಯಾಧ್ವರ ಯಕ್ಷಗಾನ ತಾಳಮದ್ದಳೆ ನಡೆಯಿತು. ಗೋವಿಂದ ಭಟ್ ಬೇಂದ್ರೋಡಿ, ಶಿವಶಂಕರ ಭಟ್ ತಲ್ಪಣಾಜೆ, ಕೇಶವ ಭಟ್ ಕಂಬಾರು, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಕೃಷ್ಣಮೂರ್ತಿ ಪಾಡಿ, ಅನಿಕೇತ ಸುಬ್ರಾಯ ಭಟ್, ಅನಘಾ ಲಕ್ಷ್ಮಿ, ಬಾಲಕೃಷ್ಣ ಆಚಾರ್ ನೀರ್ಚಾಲು, ಶಿವಾನಂದ ಕುಂಬಳೆ, ಅಶೋಕ ಶೇಡಿಕಾವು, ಸದಾಶಿವ ಮುಳಿಯಡ್ಕ, ಜನಾರ್ದನ ಆಚಾರ್ ನಾಯ್ಕಾಪು, ಉದಯಶಂಕರ ಭಟ್ ಮಜಲು ಮೊದಲಾದವರು ಭಾಗವಹಿಸಿರು.



