ನವದೆಹಲಿ: "ಆರೆಸ್ಸೆಸ್-ಬಿಜೆಪಿ ಸಮಾನ ಭಾರತದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದು, ಸಂವಿಧಾನವನ್ನು ಮುಗಿಸಲು ಬಯಸುತ್ತಿದೆ" ಎಂದು ರವಿವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಗೂ ಮುನ್ನ ಮಂಡಿ ಹೌಸ್ ಬಳಿ "ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ" ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
"ಅಂಬೇಡ್ಕರ್ ಅವರ ಪ್ರಮುಖ ಸಂದೇಶ ಸಂವಿಧಾನ. ಸಂವಿಧಾನವಿಲ್ಲದೆ ನಾವು ಕರೆಯುತ್ತಿರುವ ಭಾರತ ಇರುತ್ತಿರಲಿಲ್ಲ. ಆರೆಸ್ಸೆಸ್-ಬಿಜೆಪಿ ಮನಸ್ಥಿತಿ ಹೊಂದಿರುವವರು ಇಂದು ಸಂವಿಧಾನವನ್ನು ಮುಗಿಸಲು ಬಯಸುತ್ತಿದ್ದಾರೆ. ಅವರೇನೇ ಹೇಳಿದರೂ, ಅವರ ಪ್ರಮುಖ ಉದ್ದೇಶ ಸಂವಿಧಾನವನ್ನು ಅಳಿಸಿ ಹಾಕುವುದು. ಯಾಕೆಂದರೆ, ಅವರಿಗೆ ಭಾರತದಲ್ಲಿನ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುವುದು ಬೇಕಿಲ್ಲ" ಎಂದು ಅವರು ಆರೋಪಿಸಿದರು.
"ಆರೆಸ್ಸೆಸ್-ಬಿಜೆಪಿ ಏನೇ ಮಾಡಿದರೂ, ಅಂಬೇಡ್ಕರ್ ಪ್ರತಿಮೆಯೆದುರು ತಲೆ ಬಾಗಿದರೂ, ಅವರ ಉದ್ದೇಶ ಮಾತ್ರ ಸಂವಿಧಾನವನ್ನು ಮುಗಿಸುವುದಾಗಿದೆ. ನಮ್ಮ ಉದ್ದೇಶ ಸಂವಿಧಾನವನ್ನು ರಕ್ಷಿಸುವುದು ಹಾಗೂ ಸಂವಿಧಾನವನ್ನು ಬಲಪಡಿಸುವುದಾಗಿದೆ" ಎಂದು ಅವರು ಘೋಷಿಸಿದರು.
ಸಂವಿಧಾನಿಕ ಮೌಲ್ಯಗಳ ಸಂದೇಶವನ್ನು ದೇಶಾದ್ಯಂತ ಕೊಂಡೊಯ್ಯುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ನಮಗೆ ಸಂವಿಧಾನದ ಚಿಂತನೆ ಬೇಕಿದೆ ಹಾಗೂ ಅದರ ರಕ್ಷಣೆ ದೇಶದ ಮೂಲೆಮೂಲೆಗೂ ತಲುಪಬೇಕಿದೆ. ಹೀಗಾಗಿಯೇ ನಾವು, "ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ" ಆಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಬಳಿಕ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ಈ ಮ್ಯಾರಥಾನ್ ಅನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗ ಆಯೋಜಿಸಿದ್ದು, ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳಿಗೆ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಸೂಚಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ.

