ಕತ್ನಿ : ಎಕ್ಸ್ ಪ್ರೆಸ್ ರೈಲಿನಲ್ಲಿ ಬಿಹಾರದ ಸುಮಾರು 163 ಬಾಲಕರನ್ನು ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸುಳಿವನ್ನು ಆಧರಿಸಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿದ ರೈಲ್ವೆ ರಕ್ಷಣಾ ಪಡೆ ಹಾಗೂ ಸರಕಾರಿ ರೈಲ್ವೆ ಪೊಲೀಸರು, ಲಾತೂರಿಗೆ ಕೂಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದ್ದ ಸುಮಾರು ಆರರಿಂದ ಹದಿಮೂರು ವರ್ಷಗಳ ನಡುವಿನ ಮಕ್ಕಳನ್ನು ತಡೆದು ರಕ್ಷಿಸಿದ್ದಾರೆ ಎಂದು PಖಿI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯರಾತ್ರಿಯಲ್ಲಿ ನಡೆದ ಈ ಜಂಟಿ ಕಾರ್ಯಾಚರಣೆಯಲ್ಲಿ ಯಾವುದೇ ಮಾನ್ಯತೆ ಹೊಂದಿದ ಟಿಕೆಟ್ ಅಥವಾ ದಾಖಲೆಗಳಿಲ್ಲದೆ ಪಾಟ್ನಾ-ಪೂರ್ನಾ ಎಕ್ಸ್ ಪ್ರೆಸ್ ರೈಲಿನಲ್ಲಿ ಅಪ್ರಾಪ್ತ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಎಂಟು ಮಂದಿಯ ಗುಂಪನ್ನು ರೈಲ್ವೆ ರಕ್ಷಣಾ ಪಡೆ ಹಾಗೂ ಸರಕಾರಿ ರೈಲ್ವೆ ಪೊಲೀಸರು ಕತ್ನಿ ರೈಲ್ವೆ ನಿಲ್ದಾಣದಲ್ಲಿ ತಡೆ ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೂಲಿ ಕೆಲಸಕ್ಕಾಗಿ ಬಿಹಾರದ ಅರಾರಿಯಾ ಪ್ರಾಂತ್ಯದಿಂದ ಮಹಾರಾಷ್ಟ್ರದ ಲಾತೂರಿಗೆ ಈ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಮಕ್ಕಳ ಕಳ್ಳಸಾಗಣೆಯಾಗುತ್ತಿರುವ ಸಾಧ್ಯತೆ ಇದೆ ಎಂಬ ಸುಳಿವನ್ನು ಸ್ವೀಕರಿಸಿದ ಬಳಿಕ ಹಾಗೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಬಳಿ ಯಾವುದೇ ಪ್ರಯಾಣದ ದಾಖಲೆಗಳು ಇಲ್ಲದೆ ಇದ್ದುದರಿಂದ ಅನುಮಾನಗೊಂಡು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆಯ ಇನ್ಸ್ ಪೆಕ್ಟರ್ ವಿರೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಕಳ್ಳಸಾಗಣೆಯನ್ನು ಭೇದಿಸಿದ ಬಳಿಕ, ಸರಕಾರಿ ರೈಲ್ವೆ ಪೊಲೀಸರು ಎಂಟು ಮಂದಿ ಆರೋಪಿಗಳ ವಿರುದ್ಧ 18 ವರ್ಷದ ಕೆಳಗಿನ ಮಕ್ಕಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲ ಆರೋಪಿಗಳೂ ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರು ಎಂದು ಹೇಳಲಾಗಿದೆ.

