ಟೆಹ್ರಾನ್ : ದಕ್ಷಿಣ ಇರಾನ್‍ನ ಬುಷೆಹರ್ ಪರಮಾಣು ಸ್ಥಾವರದ ಪ್ರದೇಶಕ್ಕೆ ಶನಿವಾರ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ `ಇರ್ನಾ' ಸುದ್ದಿಸಂಸ್ಥೆ ವರದಿ ಮಾಡಿದೆ.
`ಶನಿವಾರ ಬೆಳಿಗ್ಗೆ ಅಮೆರಿಕ- ಇಸ್ರೇಲ್ ನಡೆಸಿದ ಕ್ರಿಮಿನಲ್ ದಾಳಿಯಲ್ಲಿ ಒಂದು ಕ್ಷಿಪಣಿ ಬುಷೆಹರ್ ಪರಮಾಣು ಸ್ಥಾವರದ ಸಮೀಪದ ಪ್ರದೇಶಕ್ಕೆ ಅಪ್ಪಳಿಸಿದ್ದು ಸ್ಥಾವರದ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾನೆ.
ಸ್ಥಾವರಕ್ಕೆ ಯಾವುದೇ ಹಾನಿಯಾಗಿಲ್ಲ, ಆದರೆ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ. ದಕ್ಷಿಣ ಇರಾನ್‍ನ ಖುಜೆಸ್ತಾನ್ ಪ್ರಾಂತದಲ್ಲಿ ಪೆಟ್ರೊಕೆಮಿಕಲ್ಸ್ ಸ್ಥಾವರದ ಮೇಲೆಯೂ ವೈಮಾನಿಕ ದಾಳಿ ನಡೆದಿದ್ದು ಐದು ಮಂದಿ ಗಾಯಗೊಂಡಿದ್ದಾರೆ. ಮಹಶಹರ್‍ನ ವಿಶೇಷ ಪೆಟ್ರೊಕೆಮಿಕಲ್ಸ್ ವಲಯದಲ್ಲಿ ಮೂರು ಸಂಸ್ಥೆಗಳ ಮೇಲೆ ದಾಳಿ ನಡೆದಿದ್ದು ಸ್ಫೋಟಗಳು ಸಂಭವಿಸಿವೆ. ಕನಿಷ್ಠ ಐದು ಮಂದಿ ಗಾಯಗೊಂಡಿರುವ ಮಾಹಿತಿಯಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ದಾಳಿಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ `ಬುಷೆಹರ್ ಪರಮಾಣು ಸ್ಥಾವರದ ಬಳಿಗೆ ಇಸ್ರೇಲ್, ಅಮೆರಿಕ ಶನಿವಾರ ನಡೆಸಿದ ದಾಳಿಗಳು ಇರಾನ್ ಮತ್ತು ವಿಶಾಲವಾದ ಗಲ್ಫ್ ಪ್ರದೇಶಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಪೆಟ್ರೊಕೆಮಿಕಲ್ ಸ್ಥಾವರಗಳ ಮೇಲಿನ ದಾಳಿಗಳು ನೈಜ ಉದ್ದೇಶವನ್ನು ತಿಳಿಸುತ್ತವೆ. ಬುಷೆಹರ್ ಸ್ಥಾವರದ ಮೇಲೆ 4 ಬಾರಿ ದಾಳಿ ನಡೆದಿದೆ. ಉಕ್ರೇನ್‍ನ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ನೀಡಿದ ಗಮನಕ್ಕೆ ಹೋಲಿಸಿದರೆ ಬುಷೆಹರ್ ಸ್ಥಾವರದ ಸುರಕ್ಷತೆಯ ಬಗ್ಗೆ ಕಾಳಜಿಯ ಕೊರತೆ ಎದ್ದು ಕಾಣುತ್ತದೆ ಎಂದು ಅರಾಘ್ಚಿ ಟೀಕಿಸಿದ್ದಾರೆ.
ಯುದ್ಧ ಆರಂಭಗೊಂಡ ಬಳಿಕ ಇರಾನ್‍ನ 30 ವಿವಿಗಳ ಮೇಲೆ ದಾಳಿ
ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕ-ಇಸ್ರೇಲ್ ಇರಾನ್‍ನಾದ್ಯಂತ 30ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಮೇಲೆ ನೇರ ವೈಮಾನಿಕ ದಾಳಿ ನಡೆಸಿರುವುದಾಗಿ ಇರಾನ್ ಸರಕಾರ ಹೇಳಿದೆ.
ಇರಾನ್‍ನ ಪರಮಾಣು ಮತ್ತು ಶಸ್ತ್ರಾಸ್ತ್ರ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಗುರಿಯಾಗಿಸಿರುವುದಾಗಿ ಇಸ್ರೇಲ್ ಪ್ರತಿಪಾದಿಸುತ್ತಿದೆ.

