ಟೆಹ್ರಾನ್ : ಪಾಕಿಸ್ತಾನದಲ್ಲಿ ಮಧ್ಯಸ್ಥಿಕೆ ಮಾತುಕತೆಗಳನ್ನು ತಮ್ಮ ದೇಶ ಎಂದಿಗೂ ನಿರಾಕರಿಸಿಲ್ಲ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶನಿವಾರ ಹೇಳಿದ್ದಾರೆ.
ಪಾಕಿಸ್ತಾನ ಆಯೋಜಿಸಿರುವ ಮಾತುಕತೆಗೆ ಅಡಚಣೆ ಎದುರಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅರಾಘ್ಚಿ ` ಇರಾನ್‍ನ ನಿಲುವನ್ನು ಅಮೆರಿಕದ ಮಾಧ್ಯಮಗಳು ತಪ್ಪಾಗಿ ಪ್ರಸ್ತುತಪಡಿಸಿವೆ.
ನಾವು ಯಾವತ್ತೂ ಮಾತುಕತೆಗೆ ಪಾಕಿಸ್ತಾನಕ್ಕೆ ಹೋಗುವುದನ್ನು ನಿರಾಕರಿಸಲಿಲ್ಲ. ನಮ್ಮ ಮೇಲೆ ಹೇರಲಾದ ಕಾನೂನುಬಾಹಿರ ಯುದ್ಧವನ್ನು ನಿರ್ಣಾಯಕವಾಗಿ ಮತ್ತು ಶಾಶ್ವತವಾಗಿ ಕೊನೆಗೊಳಿಸುವ ಷರತ್ತುಗಳ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ' ಎಂದು ಹೇಳಿದ್ದಾರೆ.
ಈ ಮಧ್ಯೆ, ಅಮೆರಿಕ ಮುಂದಿರಿಸಿದ 48 ಗಂಟೆಗಳ ಕದನ ವಿರಾಮ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ ಎಂದು ಅನಧಿಕೃತ ಮೂಲಗಳನ್ನು ಉಲ್ಲೇಖಿಸಿ ಇರಾನ್‍ನ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕದನ ವಿರಾಮ ಪ್ರಸ್ತಾಪವನ್ನು ಬುಧವಾರ ಮೂರನೇ ದೇಶದ ಮೂಲಕ ಮಾಡಲಾಗಿದ್ದು ಅದನ್ನು ಇರಾನ್ ತಿರಸ್ಕರಿಸಿದೆ ಮತ್ತು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ, ಇರಾನ್‍ನ ಒಳಗೆ ವೈಮಾನಿಕ ದಾಳಿ ತೀವ್ರಗೊಳಿಸುವ ಮೂಲಕ ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್ ಮೇಲೆ ಒತ್ತಡ ಮುಂದುವರಿಸಿವೆ.

