ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿಯ ಪೂರೈಕೆ ಸಾಕಷ್ಟಿದೆ. ಜನತೆ ತಪ್ಪು ಮಾಹಿತಿಗೆ ಕಿವಿಗೊಡಬಾರದು ಎಂದು ಕೇಂದ್ರ ಸರಕಾರವು ಶನಿವಾರ ದೇಶದ ಜನತೆಗೆ ಮನವಿ ಮಾಡಿದೆ.
ಹಾರ್ಮುಝ್ ಜಲಸಂಧಿ ಮುಚ್ಚುಗಡೆಯ ಹಿನ್ನೆಲೆಯಲ್ಲಿ ಸಾಗಣೆಯಲ್ಲಿ ಅಡಚಣೆಗಳಿವೆಯಾದರೂ, ದೇಶಕ್ಕೆ ಸಮರ್ಪಕವಾಗಿ ಇಂಧನ ಪೂರೈಕೆಯಾಗುತ್ತಿದೆ.
ಜನತೆ ಗಾಬರಿಬಿದ್ದು ಅಗತ್ಯಕ್ಕಿಂತ ಹೆಚ್ಚು ಇಂಧನಗಳನ್ನು ಖರೀದಿಸದಂತೆ ಕಿವಿಮಾತು ಹೇಳಿದೆ.
ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಅಡುಗೆ ಅನಿಲ ಅಬಾಧಿತವಾಗಿ ಲಭ್ಯವಾಗುವುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಹೇಳಿಕೆ ತಿಳಿಸಿದೆ. ಇಂಧನ ಪೂರೈಕೆಗೆ ಸಂಬಂಧಿಸಿ, ಜನತೆ ಅಧಿಕೃತ ಮಾಹಿತಿಯನ್ನು ಮಾತ್ರವೇ ಅವಲಂಭಿಸಬೇಕು ಹಾಗೂ ಇಂಧನ ಉಳಿತಾಯ ಮಾಡುವಂತೆ ಸೂಚಿಸಿದೆ.
ವಿಶೇಷವಾಗಿ ಮನೆಗಳು, ಆಸ್ಪತ್ರೆಗಳು ಹಾಗೂ ಅವಶ್ಯಕ ಸೇವೆಗಳಿಗೆ ಎಲ್‌ಪಿಜಿ ಹಾಗೂ ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆಗೆ ಕೇಂದ್ರ ಸರಕಾರವು ಆದ್ಯತೆ ನೀಡಿದೆ. ದೇಶದಲ್ಲಿ ತೈಲಸಂಸ್ಕರಣಾಗಾರಗಳಲ್ಲಿ ಉತ್ಪಾದನೆ ಹೆಚ್ಚಳವನ್ನು ಉತ್ತೇಜಿಸಲು ಹಾಗೂ ಎಲ್‌ಪಿಜಿ ಮರುಪೂರಣ (ರೀಫಿಲ್)ಗಳ ನಡುವಿನ ಅವಧಿಯನ್ನು ಹೆಚ್ಚಿಸುವುದು ಸೇರಿದಂತೆ ಬೇಡಿಕೆಯನ್ನು ನಿಭಾಯಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.
ವಿತರಣಾ ಕೇಂದ್ರಗಳಲ್ಲಿ ಎಲ್‌ಪಿಜಿ ಕೊರತೆಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಸುಮಾರು 51 ಲಕ್ಷ ಸಿಲಿಂಡರ್‌ಗಳನ್ನು ಶುಕ್ರವಾರ ಪೂರೈಕೆ ಮಾಡಲಾಗಿದೆ. ಒಟ್ಟು ಬೇಡಿಕೆಯ ಶೇ.95ರಷ್ಟು ಆನ್‌ಲೈನ್ ಬುಕಿಂಗ್ ಮೂಲಕವೇ ಬಂದಿದೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ವಾಣಿಜ್ಯ ಎಲ್‌ಪಿಜಿ ಪೂರೈಕೆಗಳಿಗೆ ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಮೊದಲು ಇದ್ದುದಕ್ಕಿಂತ ಶೇ.70ರಷ್ಟು ಮಿತಿ ವಿಧಿಸಲಾಗಿದೆ. ಇದರ ಜೊತೆ ಬೇಡಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಸೀಮೆಎಣ್ಣೆ ಹಾಗೂ ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಕೂಡಾ ಬಳಸಲಾಗುತ್ತಿದೆ,
ದೇಶಾದ್ಯಂತ ಎಲ್ಲಾ ತೈಲ ಸಂಸ್ಕರಣಾಗಾರಗಳು ಅತ್ಯಧಿಕ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುತ್ತಿದೆ ಹಾಗೂ ಪೆಟ್ರೋಲ್‌ಪಂಪ್‌ಗಳಲ್ಲಿ ಸಾಕಷ್ಟು ತೈಲ ದಾಸ್ತಾನಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಚಿವಾಲಯ ತಿಳಿಸಿದೆ.

