ಕುಂಬಳೆ: ಸೀತಾಂಗೋಳಿಯಲ್ಲಿ ಹಾಡಹಗಲು ಯುವಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ತಾಸುಗಳೊಳಗಾಗಿ ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಂಬಳೆ ನಾಯ್ಕಾಪು ಬಳಿಯ ಕೋಟೆಕಾರು ನಿವಾಸಿ ಶ್ರೀನಿವಾಸ (38) ಬಂಧಿತ. ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಬಿಜು ಕೆ.ಜೋಸ್, ಎಸ್.ಐ.ಗಳಾದ ಸನತ್, ಅನಂತಕೃಷ್ಣ ಮೊದಲಾದವರ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಮದ್ಯದ ನಶೆಯಲ್ಲಿ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕನ್ಯಪ್ಪಾಡಿ ಸನಿಹದ ಬಾಪಾಲಿಪನ ನಿವಾಸಿ ಸಫಾಯಿದ್ ಯಾನೆ ಶಫಾಯತ್(35) ಅವರ ಮೃತದೇಹ ಸೀತಾಂಗೋಳಿಯ ಕಟ್ಟಡವೊಂದರ ಹಿಂಭಾಗದಲ್ಲಿ ಮಂಗಳವಾರ ಪತ್ತೆಯಾಗಿತ್ತು. ಸನಿಹದಲ್ಲಿ ರಕ್ತಸಿಕ್ತ ಮರದ ತುಂಡು ಲಭಿಸಿದ್ದು, ಇದರಲ್ಲಿ ತಲೆಗೆ ಬಡಿದು ಕೊಲೆಗೈದಿರುವುದಾಗಿ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಚರಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿರುವ ಬಗ್ಗೆ ಪೊಲೀಸರು ತನಿಖೆ ಮುಮದುವರಿಸಿದ್ದಾರೆ. ಶಫಾಯತ್ ಮತ್ತು ಶ್ರೀನಿವಾಸ ಅವರ ಮಧ್ಯೆ ಮದ್ಯದ ನಶೆಯಲ್ಲಿ ವಾಗ್ವಾದ ನಡೆದಿದ್ದು, ಇದರ ಮುಂದುವರಿಕೆಯನ್ವಯ ಬಡಿದಾಡಿಕೊಂಡಿರಬೇಕೆಂದು ಸಂಶಯಿಸಲಾಗಿದೆ.

