ಬದಿಯಡ್ಕ: ದೇವರ ಮುಂದೆ ಸಮರ್ಪಣಾ ಭಾವವಿರಬೇಕು. ನಾಡಿನ ಅನೇಕ ಭಕ್ತರ ಸದುದ್ದೇಶದ ಚಿಂತನೆಯ ಫಲವಾಗಿ ಧಾರ್ಮಿಕ ಶ್ರದ್ಧಾಕೇಂದ್ರಗಳು ಬೆಳಗುತ್ತಿವೆ. ಸಂಪತ್ತು ಕೂಡಿಡುವುದಕ್ಕಿರುವುದಲ್ಲ. ಸತ್ ಚಿಂತನೆಗಳೊಂದಿಗೆ ಸಂಪತ್ತನ್ನು ದಾನಮಾಡಿ ಪುಣ್ಯವನ್ನು ಸಂಪಾದಿಸುವ ಮನಸ್ಸು ಎಲ್ಲರಲ್ಲೂ ಇರಬೇಕು. ದಾನಿಗಳು, ಭಕ್ತರು ಧಾರ್ಮಿಕ ಕ್ಷೇತ್ರಗಳ ಸಂರಕ್ಷಕರು ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪಾಡಿ ಶ್ರೀ ಕೈಲಾರು ಶಿವ ಕ್ಷೇತ್ರದ ವಾರ್ಷಿಕೋತ್ಸವದ ಸಂದರ್ಭ ಹೊಸತಾಗಿ ನಿರ್ಮಿಸಿದ ನಿರ್ಮಾಣ ಕಾರ್ಯಗಳ ಸಮರ್ಪಣೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೃಷ್ಣದಾಸ ತಂತ್ರಿಗಳು ಆಶೀರ್ವಚನಗೈದರು. ಕೊಡುಗೈದಾನಿ ಗೋಪಾಲಕೃಷ್ಣ ಪೈ ಬದಿಯಡ್ಕ, ಸಿ.ಆರ್. ಗಂಗಾಧರನ್ ನಾಯರ್ ಚುಕ್ಕಿನಡ್ಕ ಪಾಡಿ, ಕಾರ್ಯದರ್ಶಿ ವೇಣುಗೋಪಾಲ, ಕೋಶಾಧಿಕಾರಿ ಬಿ.ಎನ್. ರವೀಂದ್ರನ್, ಉಪಾಧ್ಯಕ್ಷ ಕುಂಞÂಕೃಷ್ಣನ್ ನಾಯರ್, ಹರಿಹರ ಸೇವಾಸಮಿತಿಯ ಸದಸ್ಯರು, ದಾನಿಗಳು ಉಪಸ್ಥಿತರಿದ್ದರು. ಹರಿಹರ ಸೇವಾಸಮಿತಿಯ ಅಧ್ಯಕ್ಷ ಎಂ.ಜೆ.ಹರಿಪ್ರಸಾದ್ ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನೂತನ ನಿರ್ಮಾಣಕಾರ್ಯಗಳು:
ಕಳೆದ ಒಂದು ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಕ್ಷೇತ್ರ ಕಮಾನು, ಮೇಲ್ಮಾಡು, ಅಂಗಣಕ್ಕೆ ಗ್ರೇನೈಟ್ ಅಳವಡಿಕೆ, ತಾಮ್ರ ಅಳವಡಿಸುವ ಕಾರ್ಯಗಳನ್ನು ನಡೆಸಲಾಯಿತು. ಸಿ.ಆರ್. ಗಂಗಾಧರನ್ ನಾಯರ್ ಚುಕ್ಕಿನಡ್ಕ ಪಾಡಿ ಅವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರದ ಮೇಲ್ಮಾಡು ನಿರ್ಮಿಸಲಾಯಿತು. ಚಾಲ್ಕರ ಕಯ್ಯಾರು ಎಂಬಲ್ಲಿ ಯುವ ಕೂಟಾಯ್ಮ ಕೈಲಾರ್ ನಗರ್ ಇವರ ಸೇವೆಯಲ್ಲಿ ಕಮಾನು ಹಾಗೂ ಪಾಡಿ ಅರಮನೆಯ ವೃಂದಾ ಪ್ರಸಾದ್ ಅವರ ಸಹಯೋಗದಲ್ಲಿ ಕ್ಷೇತ್ರಾಂಗಣಕ್ಕೆ ಗ್ರಾನೈಟ್ ಅಳವಡಿಸುವ ಕಾರ್ಯ ನಡೆಯಿತು. ಊರಿನ ಹಾಗೂ ವಿದೇಶದಲ್ಲಿರುವ ಕ್ಷೇತ್ರದ ಅನೇಕ ಭಗವದ್ಭಕ್ತರ ಸಹಯೋಗದಲ್ಲಿ ತಾಮ್ರ ಅಳವಡಿಸುವ ಕಾರ್ಯ ನಡೆಸಲಾಯಿತು.

