ಮಂಜೇಶ್ವರ: ಮಹಾನ್ ಸಾಹಿತಿಗಳು, ಕಲಾವಿದರು, ಇತರ ಕ್ಷೇತ್ರಗಳ ಸಾಧಕರನ್ನು ಬಳುವಳಿಯಾಗಿ ಕೊಟ್ಟ ನೆಲ ಕಾಸರಗೋಡು. ಕನ್ನಡ ಭಾಷೆಗೆ ನೀಡಿದ ಕೊಡುಗೆಗಳು ಅನನ್ಯ. ಆ ನಿಟ್ಟಿನಲ್ಲಿ ಕನ್ನಡದ ಶಾಸಕನಿಗೆ ಬೆಂಬಲ ನೀಡಬೇಕು. ಕೇರಳ ವಿಧಾನ ಸಭೆಯಲ್ಲಿ ಕನ್ನಡ ಪ್ರತಿಧ್ವನಿಸುವ ಕೆಲಸ ಇವರಿಂದ ಆಗಬೇಕಾಗಿದೆ. ಆದ್ದರಿಂದ ಅಶ್ರಫ್ ರವರಿಗೆ ಅಮೂಲ್ಯ ಮತವನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದರು.
ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಜೇಶ್ವರದಿಂದ ಯುಡಿಎಫ್ ಅಭ್ಯರ್ಥಿಯಾಗಿ ಕಣದಲ್ಲಿರುವ ಎಕೆಎಂ ಅಶ್ರಫ್ ಪರ ಮತಯಾಚಿಸಲು ಭಾನುವಾರ ಸಂಜೆ ಮಜೀರ್ಪಳ್ಳಕ್ಕೆ ಆಗಮಿಸಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷವನ್ನು ಕೇರಳ ಜನತೆ ಬೆಳೆಯಲು ಬಿಟ್ಟಿಲ್ಲ. ಅವರು ಸಂವಿಧಾನ ವಿರೋಧಿ, ಬಡಜನ ವಿರೋಧಿ ಮತ್ತು ಮಹಿಳಾ ವಿರೋಧಿಗಳು. ಅವರಿಗೆ ಯಾವುದೇ ಸಿದ್ದಾಂತವಿಲ್ಲ. ಅವರು ಮೇಲ್ಜಾತಿ, ಶ್ರೀಮಂತರ ಪರ ಎಂದವರು ಕುಟುಕಿದರು.
ಗ್ಯಾರಂಟಿ ಯೋಜನೆಗಳು ಜನಗಳ ಶ್ರೇಯೋಭಿವೃದ್ದಿಗೆ ಸಹಕಾರಿಯಾಗಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಬದ್ದ. ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ನಮ್ಮ ಚುನಾವಣಾ ಪ್ರಣಾಳಿಕೆ. ಅದನ್ನು ಜಾರಿಗೆ ತರಬೇಕಾದರೆ ಕೇರಳದ ಜನರು ಮನಸ್ಸು ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಗಡಿನಾಡಿನ ಕನ್ನಡ ಭಾಷಾ ಸವಾಲುಗಳಿಗೆ ನ್ಯಾಯ ಒದಗಿಸಲು, ಕನ್ನಡಿಗರ ಸಾಂವಿಧಾನಿಕ ಹಕ್ಕಿನ ರಕ್ಷಣೆ ಕಾಂಗ್ರೆಸ್ಸ್ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಮದವರು ತಿಳಿಸಿದರು.
ಶಬರಿಮಲೆಯ ಚಿನ್ನಕಳ್ಳತನ ಕಮ್ಯೂನಿಸ್ಟ್ ಸರ್ಕಾರದ ಕುತಂತ್ರವಾಗಿದೆ. ನಿರಪರಾದಿಗಳು ಶಿಕ್ಷೆಗೊಳಗಾಗಬಾರದು. ಅಪರಾದಿಗಳಿಗೆ ಶಿಕ್ಷೆಯಾಗಬೇಕು. ಹತ್ತು ವರ್ಷದ ಆಡಳಿತದಲ್ಲಿ ದಿನ ಉಪಯೋಗಿ ವಸ್ತುಗಳ ಬೆಲೆಯೇರಿಕೆಗೆ ಕೊಡುಗೆಯನ್ನು ನೀಡಿದ್ದಾರೆ. ಮಾವೇಲಿ ಸ್ಟೋರಿನಲ್ಲಿ ಸಬ್ಸಿಡಿ ದರಕ್ಕೆ ಸಿಗುವ ವಸ್ತುಗಳು ವಿಕ್ರಯಿಸುತ್ತಿಲ್ಲ. ಆರೋಗ್ಯ, ಕೃಷಿ ಕೈಗಾರಿಕಾ ರಂಗದಲ್ಲಿ ಶೂನ್ಯ ಅಭಿವೃದ್ಧಿ ಕೊಡುಗೆ ಕೊಟ್ಟ ಕಮ್ಯೂನಿಸ್ಟ್ ಸರ್ಕಾರದ ಕೊನೆ ದಿನಗಳು ಬಂದಿದೆ. ಸಾವಿರ ಮತಗಳ ಅಂತರದಿಂದ ಎಕೆಎಂ ಅಶ್ರಫ್ ರನ್ನು ವಿಜಯಗೊಳಿಸಿ ಈ ಮಂಜೇಶ್ವರದ ನಾಡಿನ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ನಾಯಕನನ್ನು ಗೆಲ್ಲುವ ಮೂಲಕ ಶ್ರಮಪಡಬೇಕಾಗಿದೆ ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು.
ಈ ಸಂದರ್ಭ ಅಭ್ಯರ್ಥಿ ಎಕೆಎಂ ಅಶ್ರಫ್, ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರಮಾನಾಥ ರೈ,ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಫೈಝಲ್, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಸದಸ್ಯ ವಕೀಲ ಸುಬ್ಬಯ್ಯ ರೈ ಇನ್ನಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಳಿಕ ಮುಳ್ಳೇರಿಯದಲ್ಲಿ ನಡೆದ ಪ್ರಚಾರ ಸಭೆಗೆ ತೆರಳಿದರು.

.jpg)
.jpg)
.jpg)
