ವಾಷಿಂಗ್ಟನ್ : ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮತ್ತು ಅಮೆರಿಕದ ವಾಯುಪಡೆ ಮುಖ್ಯಸ್ಥ ಜನರಲ್ ಕೆನ್ ವಿಲ್ಸ್‌ಬಾಚ್ ಅವರು ಉಭಯ ದೇಶಗಳ ನಡುವಿನ ರಕ್ಷಣಾ ಪಾಲುದಾರಿಕೆ ಹಾಗೂ ಆದ್ಯತೆಗಳ ಕುರಿತು ಚರ್ಚೆ ನಡೆಸಿದರು.
ಏಪ್ರಿಲ್ 8ರಂದು ಇಲ್ಲಿನ ಜಾಯಿಂಟ್ ಬೇಸ್ ಅನಾಕೋಸ್ಟಿಯಾ-ಬೋಲಿಂಗ್‌ಗೆ ಸಿಂಗ್ ಭೇಟಿ ನೀಡಿದರು.
ನಂತರ, ಪೆಂಟಗನ್‌ನಲ್ಲಿ ವಾಯುಪಡೆಯ ಕಾರ್ಯದರ್ಶಿ ಟ್ರಾಯ್ ಮಿಂಕ್ ಮತ್ತು ವಿಲ್ಸ್‌ಬಾಚ್ ಅವರನ್ನು ಭೇಟಿಯಾದರು.
ಕೊಲೊರಾಡೋದ ಪೀಟರ್ಸನ್ ಸ್ಪೇಸ್ ಫೋರ್ಸ್ ಬೇಸ್‌ಗೆ ಭೇಟಿ ನೀಡಿದ ಸಿಂಗ್, ವಾಯುಪಡೆಯಲ್ಲಿನ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದರು.
ನೆವಾಡಾದ ನೆಲ್ಲಿಸ್ ವಾಯುಪಡೆ ನೆಲೆಗೂ ಭೇಟಿ ನೀಡಿ, ವಾರ್‌ಫೇರ್ ಸೆಂಟರ್‌ನಲ್ಲಿ ಎಫ್-15 ಇಎಕ್ಸ್ ಈಗಲ್ 2 ವಿಮಾನ ಹಾರಾಟದ ಬಗ್ಗೆ ಮಾಹಿತಿ ಪಡೆದರು.
'ನಮ್ಮ ವಾಯುಪಡೆಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಬಲಪಡಿಸಲು ಈ ರೀತಿಯ ಅವಕಾಶ ಗಳು ನಿರ್ಣಾಯಕವಾಗಿವೆ' ಎಂದಿದ್ದಾರೆ.

