HEALTH TIPS

ಕೊಲ್ಲಿ ಸಂಘರ್ಷ: ತತ್ಕಾಲಿಕ ಕದನ ವಿರಾಮ ಏರ್ಪಟ್ಟರೂ ಉತ್ತರ ಸಿಗದ ಪ್ರಶ್ನೆಗಳು

ದುಬೈ: ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದಕ್ಕೆ ಮೊದಲ ದಿನವೇ ಉಲ್ಲಂಘನೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಅಂತ್ಯವಾದಂತೆ ಕಾಣುತ್ತಿಲ್ಲ. ಒಂದೆಡೆ, ಇಸ್ರೇಲ್‌ ಪಡೆಗಳು ಲೆಬನಾನ್‌ ಮೇಲೆ ದಾಳಿಯನ್ನು ಮುಂದುವರಿಸಿದರೆ, ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಾತ್ಕಾಲಿಕ ಕದನ ವಿರಾಮದ ಬಗ್ಗೆ ಬುಧವಾರ ಘೋಷಣೆ ಮಾಡಿದ್ದರು. ಷರತ್ತುಗಳಿಗೆ ಒಳಪಟ್ಟು ಕದನ ವಿರಾಮಕ್ಕೆ ಸಮ್ಮತಿಸುವುದಾಗಿ ಇರಾನ್‌ ಹೇಳಿತ್ತು. ಈ ಕದನ ವಿರಾಮ ಒಪ್ಪಂದವು ಲೆಬನಾನ್‌ ಮೇಲೆ ತಾನು ನಡೆಸುತ್ತಿರುವ ದಾಳಿಗೆ ಒಳಪಡುವುದಿಲ್ಲ ಎಂದು ಇಸ್ರೇಲ್‌ ಬುಧವಾರವೇ ಹೇಳಿತ್ತು. ಇಂದು ಲೆಬನಾನ್‌ ರಾಜಧಾನಿ ಬೈರೂತ್‌ ಹಾಗೂ ಬಂಡುಕೋರರ ಸಂಘಟನೆ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ.

ಈ ನಡುವೆ ಕದನ ವಿರಾಮ ಒಪ್ಪಂದದಂತೆ ನಡೆದುಕೊಳ್ಳದಿದ್ದಲ್ಲಿ ಈ ಮೊದಲಿನಕ್ಕಿಂತಲೂ ಭೀಕರವಾಗಿ ದಾಳಿ ನಡೆಸುವುದಾಗಿ ಇರಾನ್‌ಗೆ ಟ್ರಂಪ್‌ ಎಚ್ಚರಿಸಿದ್ದಾರೆ.

ಈ ಎಲ್ಲ ವಿದ್ಯಮಾನಗಳು ಕದನ ವಿರಾಮ ಒಪ್ಪಂದಕ್ಕೆ ಸ್ಪಷ್ಟ ರೂಪ ನೀಡಿ, ಅದನ್ನು ಜಾರಿಗೊಳಿಸುವ ಕುರಿತಂತೆ ಅನಿಶ್ಚಿತತೆ ಹಾಗೂ ಸಂಶಯ ಮೂಡುವಂತೆ ಮಾಡಿವೆ.

ಉತ್ತರ ಸಿಗದ ಪ್ರಶ್ನೆಗಳು

ಕದನ ವಿರಾಮ ಒಪ್ಪಂದ ಕುರಿತಂತೆ ಇನ್ನೂ ಸಹಮತ ಮೂಡಿಲ್ಲ. ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿರುವ ವಿಚಾರವು ಒಪ್ಪಂದದ ಭಾಗವಾಗಿದೆಯೋ ಇಲ್ಲವೋ ಎಂಬುದಕ್ಕಿಂತ ಇತರ ಹಲವು ಸಂಗತಿಗಳು ಕದನ ವಿರಾಮ ಕುರಿತಂತೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇರಾನ್‌ ಬಳಿ ಇರುವ ಸಮೃದ್ಧೀಕರಿಸಿದ ಯುರೇನಿಯಂ ದಾಸ್ತಾನು ಕುರಿತು ಏನು ನಿರ್ಣಯ ತೆಗೆದುಕೊಳ್ಳಲಾಗುತ್ತದೆ? ಹೊರ್ಮುಜ್‌ ಜಲಸಂಧಿ ಮೂಲಕ ಹಡಗುಗಳ ಸಂಚಾರವು ಸಹಜ ಸ್ಥಿತಿಗೆ ಮರಳುವುದು ಯಾವಾಗ ಮತ್ತು ಹೇಗೆ?. ಇನ್ನು, ಭವಿಷ್ಯದಲ್ಲಿ ಕ್ಷಿಪಣಿ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯ ತಗ್ಗುವುದೇ ಎಂಬ ಪ್ರಶ್ನೆಗಳು ಮೂಡಿವೆ.

'ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ಗುಣಮಟ್ಟದ ಇರುವ ಯುರೇನಿಯಂ ಹೊಂದುವುದು ಇರಾನ್‌ನ ಹಕ್ಕು. ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆ ವೇಳೆ ಈ ಕುರಿತು ಪ್ರಸ್ತಾಪಿಸಲಾಗುವುದು' ಎಂದು ಇರಾನ್‌ನ ಅಣು ಶಕ್ತಿ ಸಂಘಟನೆ(ಎಇಒಐ) ಮುಖ್ಯಸ್ಥ ಮೊಹಮ್ಮದ್ ಇಸ್ಲಾಮಿ ಹೇಳಿದ್ದಾರೆ.

ಯುರೇನಿಯಂ ಸಮೃದ್ಧೀಕರಿಸುವ ಕುರಿತ ಇರಾನ್‌ನ ವಾದ ಒಪ್ಪುವುದಿಲ್ಲ ಎಂದು ಅಮೆರಿಕ ಹೇಳಿದೆ. ಹೀಗಾಗಿ ತಾತ್ಕಾಲಿಕ ಕದನ ವಿರಾಮ ಕುರಿತಂತೆ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್ 10ರಂದು ನಡೆಯಲಿರುವ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries