ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮೊದಲಿನಿಂದಲೂ ಇರಾನ್ ಅಮೆರಿಕದ ಮೇಲೆ ನಂಬಿಕೆ ಇಟ್ಟಿಲ್ಲ.
ಏಕೆಂದರೆ ಅದು (ಅಮೆರಿಕ) ಕೊಟ್ಟ ಮಾತನ್ನು ಪದೇ ಪದೇ ಉಲ್ಲಂಘಿಸುತ್ತಾ ಬಂದಿದೆ. ಈಗ ಮತ್ತೊಮ್ಮೆ ಪುನರಾವರ್ತನೆಯಾಗಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಇದಲ್ಲದೆ, 10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಗಾಲಿಬಾಫ್ ಹೇಳಿದ್ದಾರೆ.
ಮೊದಲನೆಯದು ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದ ಷರತ್ತನ್ನು ಪಾಲಿಸದಿರುವುದು.
ಲೆಬನಾನ್‌ನಲ್ಲಿರುವ ಇಸ್ಲಾಮಿಕ್ ರೆಸಿಸ್ಟನ್ಸ್ ಸೇರಿ ಎಲ್ಲ ಗುಂಪುಗಳ ವಿರುದ್ಧ ನಡೆಸುತ್ತಿರುವ ಯುದ್ಧ/ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಹೇಳಲಾಗಿತ್ತು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಲೆಬನಾನ್ ಮತ್ತು ಇತರ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಕದನ ವಿರಾಮ ತಕ್ಷಣವೇ ಜಾರಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಎರಡನೆಯದು ವಾಯು ಪ್ರದೇಶದ ಉಲ್ಲಂಘನೆ. ಇರಾನ್‌ನ ವಾಯು ಪ್ರದೇಶಕ್ಕೆ ಡ್ರೋನ್ ಪ್ರವೇಶಿಸಿದ್ದು, ಫಾರ್ಸ್ ಪ್ರಾಂತ್ಯದ ಲಾರ್ ನಗರದಲ್ಲಿ ಅದನ್ನು ಹೊಡೆದುರುಳಿಸಲಾಗಿದೆ. ಇದು ಇರಾನ್ ವಾಯುಪ್ರದೇಶವನ್ನು ಉಲ್ಲಂಘಿಸಬಾರದು ಎಂಬ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.
ಮೂರನೆಯದು, ಯುರೇನಿಯಂ ಸಮೃದ್ಧಗೊಳಿಸುವಿಕೆ ಕುರಿತು ಇರಾನ್ ಹೊಂದಿರುವ ಹಕ್ಕನ್ನು ಒಪ್ಪಿಕೊಳ್ಳಬೇಕು ಎಂಬುವುದಾಗಿತ್ತು.
ಈ ಷರತ್ತುಗಳನ್ನು ಉಲ್ಲಂಘಿಸಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಕದನ ವಿರಾಮ ಅಥವಾ ದ್ವಿಪಕ್ಷೀಯ ಮಾತುಕತೆಗಳು ಅಸಮಂಜಸವಾಗಿದೆ ಎಂದು ಗಾಲಿಬಾಫ್ ಹೇಳಿದ್ದಾರೆ.
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಬುಧವಾರ ಸಮ್ಮತಿಸಿದ್ದವು.
'ಇರಾನ್ ಮುಂದಿಟ್ಟಿರುವ ಷರತ್ತುಗಳು 'ಕಾರ್ಯಸಾಧ್ಯವಾದವುಗಳು' ಎಂದು ಈ ಮೊದಲು ಹೇಳಿದ್ದ ಟ್ರಂಪ್ ಬಳಿಕ ತಮ್ಮ ನಿಲುವು ಬದಲಾಯಿಸಿದ್ದರು. 'ಈ ಅಂಶಗಳ ಕುರಿತು ವಿಸ್ತೃತವಾದ ವಿವರಣೆ ನೀಡದಿದ್ದಲ್ಲಿ ಕದನ ವಿರಾಮ ಕುರಿತ ಇರಾನ್ ಯೋಜನೆಯೇ ವಂಚನೆ ಎನಿಸಲಿದೆ' ಎಂದು ಪ್ರತಿಕ್ರಿಯಿಸಿದ್ದರು.
ಇದಲ್ಲದೆ, 15 ಅಂಶಗಳ ಶಾಂತಿ ಒಪ್ಪಂದಕ್ಕೆ ಇರಾನ್‌ನಿಂದ 10 ಅಂಶಗಳ ಪ್ರತಿ-ಪ್ರಸ್ತಾಪವನ್ನು ಸ್ವೀಕರಿಸಿದ್ದೇನೆ ಎಂದೂ ಅವರು ಹೇಳಿದ್ದರು.

