ಗುವಾಹಟಿ: ಅಸ್ಸಾಂನ ಕೋಕ್ರಾಜಾರ್ ಜಿಲ್ಲೆಯ ರೈಮೋನಾ ರಾಷ್ಟ್ರೀಯ ಉದ್ಯಾನವನದ ಬಳಿ 'ಸೈರ್ಟೊಡಾಕ್ಟಿಲಸ್ ರೈಮೋನೆನ್ಸಿಸ್' (Cyrtodactylus Raimonaensis) ಎಂಬ ಹೊಸ ಪ್ರಭೇದದ ಹಲ್ಲಿ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಈ ಹೊಸ ಪ್ರಭೇದದ ಹಲ್ಲಿಗೆ 'ರೈಮೋನಾ ಬೆಂಟ್-ಟೋಡ್ ಗೆಕ್ಕೊ' ಎಂದು ಹೆಸರಿಡಲಾಗಿದ್ದು, ಇದು ರೈಮೋನಾ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಪಡೆದುಕೊಂಡಿದೆ.
'ಝೂಟಾಕ್ಸಾ' ನಿಯತಕಾಲಿಕೆಯ ಆಯ್ದ ಭಾಗವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಶರ್ಮಾ, 'ರಾಜ್ಯ ಸರ್ಕಾರವು ವಿವಿಧ ಪ್ರಭೇದಗಳ ಆವಾಸಸ್ಥಾನಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತದೆ ಮತ್ತು ವೈಜ್ಞಾನಿಕ ಸಂಶೋಧನೆಗೆ ಬೆಂಬಲ ನೀಡಲಿದೆ' ಎಂದು ಭರವಸೆ ನೀಡಿದ್ದಾರೆ.
'ಅಸ್ಸಾಂನಲ್ಲಿ ಒಂದು ಗಮನಾರ್ಹ ಆವಿಷ್ಕಾರ. ಕೋಕ್ರಾಜಾರ್ ಜಿಲ್ಲೆಯ ರೈಮೋನಾ ರಾಷ್ಟ್ರೀಯ ಉದ್ಯಾನವನದ ಬಳಿ ಹೊಸ ಪ್ರಭೇದದ ಗೆಕ್ಕೊ (ಹಲ್ಲಿ) ಪತ್ತೆಯಾಗಿದೆ. ನಮ್ಮ ರಾಜ್ಯದ ಶ್ರೀಮಂತ ಜೀವವೈವಿಧ್ಯತೆ ಎತ್ತಿ ತೋರಿಸುವ ಸಲುವಾಗಿ ಈ ಹಲ್ಲಿಗೆ ಉದ್ಯಾನವನದ ಹೆಸರನ್ನೇ ಇಡಲಾಗಿದೆ. ರಾಜ್ಯದ ನೈಸರ್ಗಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ನಾವು ಇಂತಹ ಆವಾಸಸ್ಥಾನವನ್ನು ರಕ್ಷಿಸುವುದು ಮತ್ತು ವೈಜ್ಞಾನಿಕ ಸಂಶೋಧನೆ ಬೆಂಬಲಿಸುವುದು ಮುಂದುವರಿಸುತ್ತೇವೆ' ಎಂದು ಶರ್ಮಾ ಬರೆದುಕೊಂಡಿದ್ದಾರೆ.
ಗೆಕ್ಕೊಗಳ ಬಗ್ಗೆ ಮಾಹಿತಿ...
ಗೆಕ್ಕೊಗಳು ಸಣ್ಣ ಗಾತ್ರದ ಹಲ್ಲಿಗಳಾಗಿವೆ. 'ಝೂಟಾಕ್ಸಾ' ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಲೇಖನದ ಪ್ರಕಾರ, ರೈಮೋನಾ ಬೆಂಟ್-ಟೋಡ್ ಗೆಕ್ಕೊ ತನ್ನ ಜೀನ್ ಸೀಕ್ವೆನ್ಸ್ ಡೇಟಾದ ಪ್ರಕಾರ 'ಸೈರ್ಟೊಡಾಕ್ಟಿಲಸ್ ಸೆಪ್ಟೆಂಟ್ರಿಯೋನಾಲಿಸ್' ವರ್ಗಕ್ಕೆ ಸೇರಿದೆ. ವಯಸ್ಕ ರೈಮೋನಾ ಹಲ್ಲಿಯು ಗರಿಷ್ಠ 71.1 ಮಿಮೀ ಉದ್ದದವರೆಗೆ (ಮೂಗಿನಿಂದ ಬಾಲದ ಆರಂಭದವರೆಗೆ) ಬೆಳೆಯಬಲ್ಲದು. ಇದು ದುಂಡಗಿನ ಮತ್ತು ಮೊಂಡಾದ ಶಂಕುವಿನಾಕಾರದ ದೇಹವನ್ನು ಹೊಂದಿರುತ್ತದೆ.
ರೈಮೋನಾ ರಾಷ್ಟ್ರೀಯ ಉದ್ಯಾನವನದ ವಿಶೇಷತೆ...
ರೈಮೋನಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂ ರಾಜ್ಯದ ಪಶ್ಚಿಮ ಭಾಗದಲ್ಲಿದ್ದು, ಪೂರ್ವ ಹಿಮಾಲಯದ ದಕ್ಷಿಣ ತಪ್ಪಲಿನಲ್ಲಿದೆ. ಭೂತಾನ್‌ನ ಫಿಬ್ಸೂ ವನ್ಯಜೀವಿ ಅಭಯಾರಣ್ಯ ಮತ್ತು ಪಶ್ಚಿಮ ಬಂಗಾಳದ ಬಕ್ಸಾ ಟೈಗರ್ ರಿಸರ್ವ್‌ನೊಂದಿಗೆ ಸೇರಿ, ಇದು 2,400 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ವಿಸ್ತೀರ್ಣದ ಗಡಿಯಾಚೆಗಿನ ಸಂರಕ್ಷಣಾ ಪ್ರದೇಶವಾಗಿದೆ.
ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಅಳಿವಿನಂಚಿನಲ್ಲಿರುವ ಗೋಲ್ಡನ್ ಲಂಗೂರ್, ಏಷ್ಯನ್ ಆನೆ, ರಾಯಲ್ ಬೆಂಗಾಲ್ ಟೈಗರ್, ಚಿರತೆ, ಕಾಡು ಎಮ್ಮೆ, ಚುಕ್ಕೆ ಜಿಂಕೆ ಸೇರಿದಂತೆ 170 ಜಾತಿಯ ಪಕ್ಷಿಗಳು ಮತ್ತು 380 ಜಾತಿಯ ಸಸ್ಯಗಳಿಗೆ ಈ ಉದ್ಯಾನವನವು ನೆಲೆಯಾಗಿದೆ.

