ನವದೆಹಲಿ: ಪ್ರಸ್ತಾವಿತ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್ಎ) ತಿದ್ದುಪಡಿ ಮಸೂದೆ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ), ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.
'ಎಫ್ಸಿಆರ್ಎ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನಾಗರಿಕ ಸಂಘಟನೆಗಳ ಮೇಲೆ ಸರ್ಕಾರದ ನಿಯಂತ್ರಣ ಹೆಚ್ಚು ಮಾಡುವ ಉದ್ದೇಶವಿದೆ. ಸಂಘಟನೆಗಳ ಹಿತಾಸಕ್ತಿ ರಕ್ಷಣೆಗಾಗಿ ಮಸೂದೆ ಕುರಿತಂತೆ ವ್ಯಾಪಕ ಸಮಾಲೋಚನೆ ನಡೆಸಬೇಕು' ಎಂದು ಸಿಬಿಸಿಐ ಪತ್ರದ ಮೂಲಕ ಒತ್ತಾಯಿಸಿದೆ.
ತಮ್ಮ ಆತಂಕಗಳ ಕುರಿತು ಸಂಸದರಿಗೂ ಸಿಬಿಸಿಐ ಪ್ರತ್ಯೇಕ ಪತ್ರ ಬರೆದಿದೆ. 'ಕೇಂದ್ರದ ಇಂತಹ ನಡೆಯು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿರಲಿದೆ. ನಾಗರಿಕ ಸಂಘಟನೆಗಳ ಸ್ವಾತಂತ್ರ್ಯಕ್ಕೆ ಹಾಗೂ ದೇಶದಲ್ಲಿ ಸಮಾಜ ಸೇವಾ ಕಾರ್ಯಗಳಿಗೆ ಭವಿಷ್ಯದಲ್ಲಿ ಧಕ್ಕೆ ಉಂಟಾಗಲಿದೆ' ಎಂದು ಪತ್ರದಲ್ಲಿ ವಿವರಿಸಿದೆ.

