HEALTH TIPS

ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ನವದೆಹಲಿ: ಖ್ಯಾತ ಕೊಂಕಣಿ ಸಾಹಿತಿ/ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಂಕಣಿ ಸಾಹಿತ್ಯ ಕ್ಷೇತ್ರದ ಗಮನಾರ್ಹ ಕೃತಿಯಾದ 'ಕೊಂಕಣಿ ಕಾವ್ಯೆಂ: ರೂಪಾಂ ಆನಿ ರೂಪಕಾಂ (ಕಾವ್ಯ ವಿಮರ್ಶೆ)' ಗಾಗಿ ಎಚ್. ಎಂ. ಪೆರ್ನಾಲ್ ಅವರಿಗೆ ಈ ಪ್ರಶಸ್ತಿ ಸಂದಿದೆ.

ಹೊಸದಿಲ್ಲಿಯ ಕಮಾನಿ ಸಭಾಂಗಣದಲ್ಲಿ ಮಂಗಳವಾರ (ಮಾರ್ಚ್ 31, 2026) ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್ ಕೌಶಿಕ್ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಸಿದ್ಧ ಹಿಂದಿ ಸಾಹಿತಿ ವಿಶ್ವನಾಥ್ ತಿವಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಿದರು. ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷೆ ಪ್ರೊ. ಕುಮುದ್ ಶರ್ಮಾ, ಕಾರ್ಯದರ್ಶಿ ಪಲ್ಲವಿ ಹೋಳ್ಕರ್, ಸಂಸ್ಕೃತಿ ಸಚಿವಾಲಯದ ಉಪ ಕಾರ್ಯದರ್ಶಿ ಅನೀಶ್ ಪಿ. ರಾಜನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಟ್ಟು 23 ಭಾಷೆಗಳಲ್ಲಿನ ಸಾಹಿತ್ಯ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಅನಾರೋಗ್ಯದ ಕಾರಣ ಮಲಯಾಳಂ ಭಾಷೆಯ ಲೇಖಕರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

►ಎಚ್.ಎಂ. ಪೆರ್ನಾಲ್ ಪರಿಚಯ

ಉಡುಪಿ ಜಿಲ್ಲೆಯ ಪೆರ್ನಾಲ್‌ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಹಾಗೂ ಎಂ.ಎಸ್.ಆರ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಮುಂಬೈಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿದ್ದಾರೆ. ಕನ್ನಡದಲ್ಲಿ ತರಂಗ, ಸಂಕ್ರಮಣ, ಶೂದ್ರ ಮುಂತಾದ ಪತ್ರಿಕೆ ಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಕಥೆಗಾರ, ಕವಿ, ವಿಮರ್ಶಕ, ಸಂಪಾದಕ ಹಾಗೂ ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.

2011ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ-ಕಿರಿಯ ಲೇಖಕರನ್ನು ಒಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕ ಗಳಿಗೆ ಸಾಹಿತ್ಯ ಲೋಕದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನದ ಮೂಲಕ ಈವರೆಗೆ 15ಕ್ಕೂ ಹೆಚ್ಚು ಮೌಲಿಕ ಸಾಹಿತ್ಯ ಕೃತಿಗಳನ್ನು ಪೆರ್ನಾಲ್ ಪ್ರಕಟಿಸಿದ್ದಾರೆ.

ಈವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು - ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು - ದೆವಾಕ್ ಸೊಡುಲ್ಲೊ ಪಾಡೊ (2002) ಮತ್ತು ಬೀಗ್ ಆನಿ ಬಿಗಾತ್ (2016), ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ.

ಕೊಂಕಣಿ ಸಾಹಿತ್ಯ ಸಮುದಾಯದಲ್ಲಿ ಸಮರ್ಪಿತ ನಾಯಕರಾಗಿರುವ ಪೆರ್ನಾಲ್ ಅವರು 2023ರಲ್ಲಿ ಮಂಗಳೂರಿ ನಲ್ಲಿ ನಡೆದ ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಅಖಿಲ ಭಾರತ ಕೊಂಕಣಿ ಪರಿಷತ್‌ನಲ್ಲಿ ಕೋಶಾಧಿಕಾರಿಯಾಗಿದ್ದಾರೆ. ಅವರು ಕೊಂಕಣಿ ಲೇಖಕರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries