ಕುಂಬಳೆ: ಜಿಲ್ಲೆಯ ಬಹುತೇಕ ಹೊಳೆಗಳು, ಜಲಮೂಲಗಳು ಬತ್ತಿಬರಡಾಗಿದ್ದು, ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಏರುತ್ತಿರುವ ತಾಪಮಾನದಿಂದ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬಾವಿ, ಕೆರೆಗಳು ಬರಿದಾಗುತ್ತಿದೆ. ನೀರಿನ ಕೊರತೆಯಿಂದ ಕೃಷಿಕರು ತಮ್ಮ ಕೃಷಿಭೂಮಿಯನ್ನು ಉಳಿಸಿಕೊಳ್ಳುವಲ್ಲಿಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ತೋಟಕ್ಕೆ ನೀರು ಹಾಯಿಸಲು ವಿದ್ಯುತ್ ವೋಲ್ಟೇಜ್ ಸಮಸ್ಯೆಯೂ ಕೃಷಿಕರನ್ನು ಕಾಡುತ್ತಿದೆ. ರಾತ್ರಿ ಸಮಯದಲ್ಲಿ ಮಾತ್ರ ಅಗತ್ಯ ವೋಲ್ಟೇಜ್ ಇರುತ್ತಿದ್ದು, ಈ ಸಂದರ್ಭ ಕಾದುನಿಂತು ನೀರು ಹಾಯಿಸಬೇಕಾಗುತ್ತಿದೆ ಎಂಬುದಾಗಿ ಕೃಷಿಕರು ತಿಳಿಸುತ್ತಾರೆ.
ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಈಗಾಘಲೇ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರುವುದು ಪೈಪ್ ಮೂಲಕ, ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ ನಾಲ್ಕು ದಿನಕ್ಕೊಮ್ಮೆ ವಿತರಣೆಗೊಳ್ಳಲಾರಂಭಿಸಿದೆ. ಇದರಿಂದಾಗಿ ನಲ್ಲಿ ನೀರನ್ನೇ ಆಶ್ರಯಿಸುತ್ತಿರುವ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದೆ.
ಕೊಡಂಗೆ ಬಾವಿಯಿಂದ ಪಂಪಿಂಗ್ ಮೂಲಕ ಹಿರಣ್ಯಪದವಿನಲ್ಲಿರುವ ಬೃಹತ್ ಟ್ಯಾಂಕ್‍ಗೆ ನೀರು ಸರಬರಾಜುಮಾಡಿ, ಪಂಚಾಯಿತಿ ವ್ಯಾಪ್ತಿಯ ನೂರಾರು ಕುಟುಂಬಗಳಿಗೆ ನೀರು ವಿತರಿಸಲಾಗುತ್ತಿದೆ. ನೀರಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ನೀರು ಪುರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ನೀರು ವಿತರಣೆಗೆ ಬದಲಿ ವ್ಯವಸ್ಥೆ ಕೈಗೊಳ್ಳುವಂತೆ ಸ್ಥಳೀಯ ಜನರು ಆಗ್ರಹಿಸಿದ್ದಾರೆ.
ನೀರು ವ್ಯಾಪಕ ಪೋಲು:
ಎಣ್ಮಕಜೆ ಪಂಚಾಯಿತಿಯ ನಾನಾ ಕಡೆ ಶುದ್ಧ ಕುಡಿಯುವ ನೀರು ವ್ಯಾಪಕವಾಗಿ ಪೋಲಾಗುತ್ತಿದೆ. ಒಂದೆಡೆ ನೀರಿನ ಬವಣೆ ಹಚ್ಚಾಗುತ್ತಿದ್ದರೆ, ಇನ್ನೊಂದೆಡೆ ಇರುವ ನೀರನ್ನು ಸಮರ್ಪಕವಾಗಿ ಪೂರೈಸಲಾಗದೆ ಜಲಪ್ರಾಧಿಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.
ಆಡಸ್ಥಳ ಹೊಳೆಯಲ್ಲಿ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದ್ದು, ಇಲ್ಲಿಂದ ಬೃಹತ್ ಬಾವಿಯಲ್ಲಿ ಸಂಗ್ರಹಿಸಿದ ನೀರನ್ನು ಗೋಳಿತ್ತಡ್ಕದಲ್ಲಿ ಸ್ಥಾಪಿಸಲಾದ ಶುದ್ಧೀಕರಣ ಘಟಕಕ್ಕೆ ರವಾನಿಸಲಾಗುತ್ತಿದೆ. ಅಲ್ಲಿಂದ ಪೆರ್ಲದ ಎತ್ತರದ ಪ್ರದೇಶದ ಟ್ಯಾಂಕ್‍ಗೆ ರವಾನಿಸಿ ಅಲ್ಲಿಂದ ವಿವಿಧೆಡೆ ಪುರೈಸಲಾಗುತ್ತಿದೆ. ಇಲ್ಲಿಂದ ಪೈಪಿನ ಮೂಲಕ ನೀರು ವಿತರಿಸುತ್ತಿದ್ದಂತೆ ಬಹುತೇಕ ಕಡೆ ಪೈಪು ಒಡೆದು ನೀರು ಪೋಲಾಗುತ್ತಿರುವುದೂ ಸಾಮಾನ್ಯವಾಗಿದೆ. ಅಡ್ಕಸ್ಥಳ ಡ್ಯಾಮ್‍ನಿಂದ ಎಣ್ಮಕಜೆ ಪಂಚಾಯಿತಿ ಅಲ್ಲದೆ ಬದಿಯಡ್ಕ ಪಂಚಾಯಿತಿಯ ಕೆಲವು ಪ್ರದೇಶಕ್ಕೂ ನೀರು ವಿತರಿಸಲಾಗುತ್ತಿದೆ. ಜತೆಗೆ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜು, ಸಾಯಿಗ್ರಾಮದಲ್ಲಿರುವ ವಸತಿ ಸಮುಚ್ಛಯಗಳಿಗೂ ಇಲ್ಲಿಂದಲೇ ನೀರು ಪೂರೈಸಲಾಗುತ್ತಿದ್ದು, ಅಡ್ಕಸ್ಥಳ ಪ್ರದೇಶದ ಜನತೆಗೆ ಅಂತರ್ಜಲ ಬರಿದಾಗುವ ಭೀತಿಯೂ ಕಾಡಲಾರಂಭಿಸಿದೆ.
(ಬತ್ತಿಬರಡಾಗಿರುವ ಪುತ್ತಿಗೆ ಅಂಗಡಿಮೊಗರು ಹೊಳೆ.)



