ಬದಿಯಡ್ಕ: ಕುಂಬಳೆ ಸೀಮೆಯ ಪ್ರಮುಖ ಐದನೇ ಕ್ಷೇತ್ರವಾಗಿ ಗುರುತಿಸಲ್ಪಟ್ಟಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಶುಕ್ರವಾರ ಆರಂಭಗೊಂಡಿದ್ದು, ಅಚ್ಚುಕಟ್ಟುತನಕ್ಕೆ ಸಾಕ್ಷಿಯಾಗಿದೆ.
ಎಲ್ಲಾ ದಿವಸ ಭೋಜನಪ್ರಸಾದದೊಂದಿಗೆ ಉಪಾಹಾರ ವ್ಯವಸ್ಥೆಯಿರುವುದರಿಂದ ಆಹಾರ ತಯಾರಿಗಾಗಿ ಕ್ಷೇತ್ರ ಸಮಿತಿ ಉರುವಲು ವ್ಯವಸ್ಥೆಯನ್ನು ಸಿದ್ಧಪಡಿಸಿಕೊಂಡಿದೆ. ಗ್ಯಾಸ್ ಪೂರೈಕೆಅಸ್ತವ್ಯಸ್ತಗೊಂಡಿರುವುದರಿಂದ ಪಾಕಶಾಲೆಯಲ್ಲಿ ಕಟ್ಟಿಗೆ ಬಳಸಿ ಅಡುಗೆ ತಯಾರಿಸಲು ಸಮಿತಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅತ್ಯಾವಶ್ಯಕ ಆಹಾರಪದಾರ್ಥ ತಯಾರಿ ಹೊರತುಪಡಿಸಿ ಎಲ್ಲಾ ಅಡುಗೆ ತಯಾರಿ ಕಟ್ಟಿಗೆ ಬಳಸಿಯೇ ನಡೆಸಲಾಗುತ್ತಿದೆ ಎಂಬುದಾಗಿ ಅಡುಗೆಮನೆ ಉಸ್ತುವಾರಿಗಳು ತಿಳಿಸುತ್ತಾರೆ. ವಿಶಾಲ ಅಡುಗೆ ಶಾಲೆಗೆ ಹೊಂದಿಕೊಂಡು ಕಟ್ಟಿಗೆ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಭಕ್ತಾದಿಗಳಿಗೆ ನಿರಂತರವಾಗಿ ಬಿಸಿ ನೀರಿನ ಪೂರೈಕೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉರಿಬಿಸಿಲಿನ ಶಾಖದ ಜತೆಗೆ ಕಟ್ಟಿಗೆ ಒಲೆಯ ತಾಪದೊಂದಿಗೆ ಪಾಕದಾಳುಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ಒಟ್ಟು ಕಾರ್ಯಕ್ರಮ ಹಸಿರು ಸಂಹಿತೆಯೊಂದಿಗೆ ನಡೆದುಬರುತ್ತಿದೆ.



