ಹೈದರಾಬಾದ್: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಪ್ರತ್ಯೇಕ ಒಳಮೀಸಲಾತಿ ನೀಡುವುದಕ್ಕೆ ಬೆಂಬಲ ನೀಡಬೇಕು ಎಂದು ಪಕ್ಷದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಒತ್ತಾಯಿಸಿದೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಭೆಯಲ್ಲಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಮಹೇಶಕುಮಾರ್ ಗೌಡ್ ಈ ಒತ್ತಾಯ ಮಾಡಿದರು. ಈ ಸಂಬಂಧ ಚರ್ಚಿಸುವುದಕ್ಕಾಗಿ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯ ಸಭೆ ಕರೆಯುವಂತೆಯೂ ಕೋರಿದರು. ಈ ಮನವಿಗೆ ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ 2024-25ರಲ್ಲಿ ನಡೆಸಿದ್ದ ಜಾತಿ ಗಣತಿಯ ವಿವರಗಳನ್ನು ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಮಹೇಶಕುಮಾರ್ ಗೌಡ್ ಇದೇ ವೇಳೆ ರಾಹುಲ್ ಅವರ ಗಮನಕ್ಕೆ ತಂದರು ಎಂದು ಇವೇ ಮೂಲಗಳು ಹೇಳಿವೆ.

