ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಹಾಗೂ ಲೋಕಸಭಾ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಉದ್ದೇಶದ ಮಸೂದೆಯನ್ನು ಇದೇ 16ರಂದು ಆರಂಭವಾಗಲಿರುವ ಸಂಸತ್‌ನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ಸಂಸತ್‌ನಲ್ಲಿ ಈ ಎರಡು ಮಸೂದೆಗಳನ್ನು ಮಂಡಿಸಿದ ವೇಳೆ ಕೇಂದ್ರದ ವಿರುದ್ಧ ಚಾಟಿ ಬೀಸಲು ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಚರ್ಚಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಚರ್ಚಿಸಲು ಬುಧವಾರ ಸಭೆ ಕರೆದಿದ್ದಾರೆ. ಎಲ್ಲ ವಿರೋಧ ಪಕ್ಷಗಳ ಹಿರಿಯ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡು ರಣತಂತ್ರ ರೂಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
'ಪ್ರಸ್ತಾವಿತ ತಿದ್ದುಪಡಿ ಮಸೂದೆಗಳು ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ' ಎಂದು ಹೇಳುವ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಪಕ್ಷದ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕೇಂದ್ರವು ಮಹಿಳಾ ಮೀಸಲಾತಿ ಜಾರಿ ಜೊತೆಗೆ ಕ್ಷೇತ್ರಗಳ ಮರುವಿಂಗಡಣೆ ಜಾರಿಗೂ ಮುಂದಾಗಿದೆ ಎಂಬುದು ವಿಪಕ್ಷಗಳ ಆರೋಪ. 2024ರ ಲೋಕಸಭಾ ಚುನಾವಣೆ ವೇಳೆ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿತ್ತು. ಈಗ ಇದನ್ನು ಜಾರಿಗೊಳಿಸಲು ಅವಸರವೇಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.
ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿನಿಮ್ಮನ್ನು ಬೆದರಿಸುತ್ತಿಲ್ಲ. ಎಚ್ಚರಿಸುತ್ತಿದ್ದೇವೆ. ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಅನ್ಯಾಯವಾದರೆ ನೀವು ಇದುವರೆಗೂ ನೋಡದ ತಮಿಳುನಾಡನ್ನು ನೋಡಲಿದ್ದೀರಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್‌ವಿಂಗಡಣೆಗೆ ಮಾಡುತ್ತಿರುವ ಅವಸರವು, ಪ್ರಜಾಪ್ರಭುತ್ವ ಹಾಗೂ ರಾಜ್ಯಗಳ ಹಕ್ಕುಗಳ ಮೇಲಿನ ನೇರ ಹಲ್ಲೆಯಾಗಿದೆ. ಡಿಎಂಕೆ ಮಾತ್ರವಲ್ಲ, ತಮಿಳುನಾಡಿನ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ, ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಈ ಪ್ರಕ್ರಿಯೆ ನಡೆಸುತ್ತಿದೆ ರೇವಂತ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿಉತ್ತರದ ರಾಜ್ಯಗಳಲ್ಲಿ ಮಹಿಳೆಯರು, ಪರಿಶಿಷ್ಟರು, ಹಿಂದುಳಿದವರ ಕ್ಷೇತ್ರಗಳ ಸಂಖ್ಯೆ ಅನುಪಾತದ ಆಧಾರದಲ್ಲಿ ಹೆಚ್ಚಲಿದೆ. ಆದರೆ ದಕ್ಷಿಣದಲ್ಲಿ ಇವರ ಕ್ಷೇತ್ರಗಳ ಸಂಖ್ಯೆ ಕಡಿಮೆಯಾದರೆ ಅನ್ಯಾಯವಾಗಲಿದೆ. ತೆಲಂಗಾಣ ಸೇರಿ ದಕ್ಷಿಣ ರಾಜ್ಯಗಳಲ್ಲಿ ಹೋರಾಟ ನಡೆಸಲಾಗುವುದು. ಕೇರಳದಲ್ಲಿ ಲೋಕಸಭಾ ಕ್ಷೇತ್ರಗಳು 20ರಿಂದ 30ಕ್ಕೆ ಹೆಚ್ಚಳವಾಗಲಿವೆ. ಆದರೆ, ಉತ್ತರ ಪ್ರದೇಶದದಲ್ಲಿ 80ರಿಂದ 120ಕ್ಕೆ ಹೆಚ್ಚಳವಾಗಲಿವೆ. ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ಮೂಲಕ ಒಮ್ಮತ ಅಭಿಪ್ರಾಯ ರೂಪಿಸುವ ಪ್ರಕ್ರಿಯೆ ನಡೆಸಬೇಕುಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡುವುದು ಹಾಗೂ ಕ್ಷೇತ್ರಗಳ ಮರುವಿಂಗಡನೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಸರ್ಕಾರ ಈ ವರೆಗೂ ಕಾಂಗ್ರೆಸ್ ಜೊತೆ ಹಂಚಿಕೊಂಡಿಲ್ಲ. ಕೇಂದ್ರದ ಈ ನಡೆ ಪ್ರಜಾಪ್ರಭುತ್ವದ ಅಣಕ ಡೆರೆಕ್ ಓಬ್ರಯಾನ್, ಟಿಎಂಸಿ ರಾಜ್ಯಸಭಾ ಸಂಸದಅಧಿವೇಶನ ಆರಂಭವಾಗುವುದಕ್ಕೆ ಕೆಲವು ಗಂಟೆಗಳು ಮಾತ್ರ ಬಾಕಿ ಇದ್ದು, ಈ ವರೆಗೆ ಯಾರೂ ಪ್ರಸ್ತಾವಿತ ತಿದ್ದುಪಡಿ ಮಸೂದೆಗಳನ್ನು ನೋಡಿಲ್ಲ. ಇದು ಸರ್ವಾಧಿಕಾರಿ ಧೋರಣೆಯಲ್ಲದೇ ಇನ್ನೇನು? ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತನ್ನು ಅಣಕಿಸುತ್ತಿದ್ದಾರೆ
ಸರ್ವಪಕ್ಷ ಸಭೆ: ಮೂಡದ ಒಮ್ಮತ
ಮಹಿಳಾ ಮೀಸಲಾತಿ ಜಾರಿ ಕುರಿತಂತೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ವಿಚಾರದಲ್ಲಿ ಕೂಡ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.
ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಏಪ್ರಿಲ್ 29ರಂದು ಮುಗಿಯಲಿದ್ದು, ಆ ಬಳಿಕವಷ್ಟೆ ಸರ್ವಪಕ್ಷ ಸಭೆ ಕರೆಯುವಂತೆ ವಿರೋಧ ಪಕ್ಷಗಳು ಆಗ್ರಹಿಸಿವೆ.
ಕೇಂದ್ರ ಸರ್ಕಾರ ವಿಪಕ್ಷಗಳ ಈ ಬೇಡಿಕೆಯನ್ನು ತಿರಸ್ಕರಿಸಿದೆ. ಈಗಾಗಲೇ ಕೆಲ ವಿರೋಧ ಪಕ್ಷಗಳೊಂದಿಗೆ ಕೇಂದ್ರ ಸರ್ಕಾರ ಈ ವಿಚಾರ ಕುರಿತು ಸಮಾಲೋಚನೆಯನ್ನೂ ನಡೆಸಿದೆ. ಆದರೆ, ಸರ್ವಪಕ್ಷ ಸಭೆ ನಡೆಸುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್, ಟಿಎಂಸಿ ಹಾಗೂ ಸಿಪಿಎಂ, ಸಮಾಲೋಚನೆ ಕುರಿತಂತೆ ಕೇಂದ್ರದ ಆಹ್ವಾನವನ್ನು ತಿರಸ್ಕರಿಸಿವೆ.

