ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದ ಭಾರತದಂತಹ ರಾಷ್ಟ್ರಗಳಿಗೆ ನೇರವಾಗಿ ಇದರ ಬಿಸಿ ಮುಟ್ಟಿದೆ. ಇದರ ನಡುವೆಯೇ ಈಗ, 'ಒಪೆಕ್' ಹಾಗೂ 'ಒಪೆಕ್+'ನಿಂದ ಹೊರಬರಲು ಯುಎಇ ತೀರ್ಮಾನಿಸಿದ್ದು, ಇದು ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.
ಏನಿದು 'ಒಪೆಕ್' ?:
ಒಪೆಕ್ ಎನ್ನುವುದು ಸೌದಿ ಅರೇಬಿಯಾ, ಇರಾಕ್, ಇರಾನ್, ಯುಎಇ, ಕುವೈತ್, ಲಿಬಿಯಾ, ವೆನೆಜುವೆಲಾ ಸೇರಿದಂತೆ 13 ತೈಲ ಉತ್ಪಾದಕ ರಾಷ್ಟ್ರಗಳ ಪ್ರಬಲ ಗುಂಪಾಗಿದೆ. ಈ ದೇಶಗಳು ಜಗತ್ತಿನ ಒಟ್ಟು ತೈಲ ಉತ್ಪಾದನೆಯಲ್ಲಿ ಸುಮಾರು ಶೇ 38ರಷ್ಟು ಅಂದರೆ ದಿನಕ್ಕೆ ಸರಿಸುಮಾರು 3.5 ಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತವೆ.
'ಪೆಟ್ರೋ-ಪಾಲಿಟಿಕ್ಸ್': ತೈಲ ಬೆಲೆಗಳ ಮೇಲೆ ಒಪೆಕ್ ಹಿಡಿತ..
ಒಪೆಕ್ ಕೇವಲ ತೈಲ ಉತ್ಪಾದಿಸುವುದಿಲ್ಲ, ಬದಲಾಗಿ ಜಾಗತಿಕ ತೈಲ ಮಾರುಕಟ್ಟೆಯ ನಾಡಿಮಿಡಿತವನ್ನು ನಿಯಂತ್ರಿಸುತ್ತದೆ. 2026ರ ಅಂತ್ಯದವರೆಗೆ ದಿನಕ್ಕೆ 36.5 ಲಕ್ಷ ಬ್ಯಾರೆಲ್‌ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಅದು ಮುಂದುವರಿಸಿದೆ. ಒಪೆಕ್ ಉತ್ಪಾದನೆಯನ್ನು ಕಡಿಮೆ ಮಾಡಿದಾಗ ತೈಲ ಬೆಲೆ ಏರುತ್ತದೆ, ಉತ್ಪಾದನೆ ಹೆಚ್ಚಿಸಿದಾಗ ಬೆಲೆ ಇಳಿಯುತ್ತದೆ. ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಒಪೆಕ್ ತೊರೆಯಲು ಯುಎಇ ತೀರ್ಮಾನ:
ಪೆಟ್ರೋಲಿಯಂ ರಫ್ತುದಾರ ದೇಶಗಳ ಒಕ್ಕೂಟಗಳಾದ 'ಒಪೆಕ್' ಹಾಗೂ 'ಒಪೆಕ್+'ನಿಂದ ಹೊರಬರಲು ಯುಎಇ ತೀರ್ಮಾನಿಸಿದೆ.
'ರಾಷ್ಟ್ರದ ಹಿತಾಸಕ್ತಿಯ ಮೇಲೆ ಗಮನ ನೀಡಲು' ಹೀಗೆ ಮಾಡುತ್ತಿರುವುದಾಗಿ ಅದು ತಿಳಿಸಿದೆ. ಕಚ್ಚಾ ತೈಲ ಉತ್ಪಾದನೆಗೆ ಕೋಟಾ ನಿಗದಿಪಡಿಸಿದ ಒಪೆಕ್ ಕ್ರಮದ ಬಗ್ಗೆ ಯುಎಇ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು.
'ಒಪೆಕ್' ಹಾಗೂ 'ಒಪೆಕ್+'ನಿಂದ ಹೊರಬರುವ ತೀರ್ಮಾನವು ಮೇ 1ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚು ಮಾಡುವ ಸ್ವಾತಂತ್ರ್ಯ ಯುಎಇಗೆ ಇರಲಿದೆ.
ಭಾರತದ ಮೇಲೆ ಪರಿಣಾಮ ಏನು ?:
2050ರ ವೇಳೆಗೆ ಜಾಗತಿಕ ತೈಲ ಬೇಡಿಕೆಯ ಬೆಳವಣಿಗೆಯಲ್ಲಿ ಭಾರತವು ಅಗ್ರಸ್ಥಾನದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಸಾರಿಗೆ ಮತ್ತು ಕೈಗಾರಿಕಾ ಚಟುವಟಿಕೆಗಳಿಂದಾಗಿ ಭಾರತದ ತೈಲ ಬೇಡಿಕೆಯು 2050ರ ವೇಳೆಗೆ ದಿನಕ್ಕೆ 82 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2026ರಲ್ಲಿ ಭಾರತದ ತೈಲ ಬೇಡಿಕೆಯ ಬೆಳವಣಿಗೆಯು ಚೀನಾಕ್ಕಿಂತಲೂ ವೇಗವಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಭಾರತವು ಒಪೆಕ್ ದೇಶಗಳಿಂದ ಶೇ.45ರಷ್ಟು ಪ್ರಮಾಣದ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಯುಎಇ ಇದರಿಂದ ಹೊರ ಬಂದಿರುವುದು ಭಾರತದ ಆಮದಿನ ಮೇಲೂ ಪರಿಣಾಮ ಬೀರಲಿದೆ. ಒಪೆಕ್ ತೈಲ ಪೂರೈಕೆಯನ್ನು ಕಡಿಮೆ ಮಾಡಿದಾಗ, ಭಾರತದ ಆಮದು ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ಸಾರಿಗೆ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಕಂಡುಬಂದು ಜನಸಾಮಾನ್ಯರ ಮೇಲೆ ಹೊರೆಯಾಗುತ್ತದೆ.
ಪ್ರಸ್ತುತ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುವ ಮೂಲಕ ಈ ಅವಲಂಬನೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.

