ಕರಾಚಿ: ಅಮೆರಿಕಾ-ಇರಾನ್ ನಡುವಿನ ಯುದ್ಧವು ಹಲವು ದೇಶಗಳ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಶೇಷವಾಗಿ ಅಡುಗೆ ಅನಿಲದ ಅಭಾವಕ್ಕೆ ಕಾರಣವಾಗಿದೆ. ಈ ಯುದ್ಧದ ಕಾರ್ಮೋಡ ಪಾಕಿಸ್ತಾನದ ಮೇಲೂ ಉಂಟಾಗಿದ್ದು, ಕರಾಚಿಯ ಕೆಲವು ಸ್ಥಳಗಳಲ್ಲಿ ಜನರು ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅಡುಗೆ ಅನಿಲ ಸಂಗ್ರಹಿಸುತ್ತಿದ್ದಾರೆ.
ಕರಾಚಿಯ ಓರಂಗಿ ಪಟ್ಟಣ ಪ್ರದೇಶದಲ್ಲಿ, ಅದರಲ್ಲೂ ಮೋಮಿನಾಬಾದ್‌ನಲ್ಲಿ ಈ ಆತಂಕಕಾರಿ ಬೆಳವಣಿಗೆ ವರದಿಯಾಗಿದೆ. ಅಲ್ಲಿನ ನಿವಾಸಿಗಳು ಅಡುಗೆ ಅನಿಲ ಸಮರ್ಯಪಕವಾಗಿ ದೊರಕದಿರುವುದರಿಂದ ಬೇಸತ್ತು ಪ್ಲಾಸ್ಟಿಕ್ ಬಲೂನ್‌ಗಳ ಮೊರೆ ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ARY ನ್ಯೂಸ್ ಪ್ರಕಾರ, 'ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅನಿಲವನ್ನು ತುಂಬಿಸಿ, ಒಂದಾದ ಮೇಲೆ ಒಂದು ಮನೆಗಳಲ್ಲಿ ಅಡುಗೆ ಕಾರ್ಯಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಬಲೂನ್ 1,000 ಪಾಕಿಸ್ತಾನ ರೂಪಾಯಿಯಿಂದ 1,500ಕ್ಕೆ ಲಭ್ಯವಿದ್ದು, ಅವುಗಳಲ್ಲಿ ಅನಿಲ ಭರ್ತಿ ಮಾಡಿ ಒಂದು ಮನೆಯಿಂದ ಇನ್ನೊಂದು ಮನೆಗೆ ರವಾನಿಸುವ ಮೂಲಕ ಬಳಕೆ ಮಾಡಲಾಗುತ್ತಿದೆ' ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
'ಪ್ಲಾಸ್ಟಿಕ್ ಬಲೂನ್ ಒಮ್ಮೆ ಭರ್ತಿಯಾದ ಬಳಿಕ, ಅದರ ಸಂಪರ್ಕ ಕಡಿತಗೊಳಿಸಿ ಅಡುಗೆ ಅಗತ್ಯಗಳನ್ನು ಪೂರೈಸಲು ದಿನವಿಡೀ ತಾತ್ಕಾಲಿಕ ಶೇಖರಣಾ ವ್ಯವಸ್ಥೆಯಾಗಿ ಬಳಸಲಾಗುತ್ತಿದೆ' ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಕರಾಚಿಯಲ್ಲಿನ ಅಡುಗೆ ಅನಿಲದ ಬಿಕ್ಕಟ್ಟಿನ ತೀವ್ರತೆಯನ್ನು ಉಲ್ಲೇಖಿಸಿರುವ ಸ್ಥಳೀಯರು, ಈ ವಿಧಾನವು 'ನಮ್ಮ ಕೊನೆಯ ಆಯ್ಕೆಯಾಗಿದೆ' ಎಂದಿದ್ದಾರೆ. ಗ್ಯಾಸ್ ಸಮಸ್ಯೆಯಿಂದಾಗಿ ಅನೇಕ ಮನೆಗಳು ದೈನಂದಿನ ಮೂಲಭೂತ ಕೆಲಸಗಳನ್ನು ನಿರ್ವಹಿಸಲು ಹೆಣಗಾಡುತ್ತಿವೆ. ಹಾಗಾಗಿ ಈ ರೀತಿಯ ಅಪಾಯಕಾರಿ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಈ ಪದ್ಧತಿಯ ಬಗ್ಗೆ ತಜ್ಞರು ಗಂಭೀರ ಸುರಕ್ಷತಾ ಕಳವಳಗಳ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅನಿಲ ಸಂಗ್ರಹಿಸುವುದರಿಂದ ತೀವ್ರ ಅಪಾಯಗಳು ಉಂಟಾಗುತ್ತವೆ. ಸುರಕ್ಷತಾ ವಿಶ್ಲೇಷಕರು ಬಲೂನ್‌ಗಳನ್ನು 'ಮೊಬೈಲ್ ಬಾಂಬ್' ಎಂದು ಬಣ್ಣಿಸಿದ್ದಾರೆ. ಸಣ್ಣ ಕಿಡಿ ಕೂಡ ದೊಡ್ಡ ಮಟ್ಟದ ಸ್ಫೋಟಕ್ಕೆ ಕಾರಣವಾಗಬಹುದು. ಜನನಿಬೀಡ ವಸತಿ ಪ್ರದೇಶಗಳಲ್ಲಿ ವಿನಾಶಕಾರಿಯಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

