ಭುಜ್: ಮುಸ್ಲಿಮರಿಗೆ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದ ಹೊರತು ಭಾರತ 'ವಿಶ್ವಗುರು' ಆಗಲು ಸಾಧ್ಯವಿಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರ ಅಸಾದುದ್ದೀನ್ ಒವೈಸಿ ಹೇಳಿದರು.
ಗುಜರಾತ್‌ನ ಭುಜ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಯುಕ್ತ ತಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸಿಗದ ಹೊರತು ಭಾರತ ವಿಶ್ವಗುರು ಆಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ನಮ್ಮ ಪಕ್ಷದ ವಿರುದ್ಧ ನಿರಂತರ ಸುಳ್ಳು ಅಪಪ್ರಚಾರಗಳನ್ನು ಬಿಜೆಪಿ, ಕಾಂಗ್ರೆಸ್, ಆರ್‌ಎಸ್‌ಎಸ್ ಮಾಡಿಕೊಂಡು ಬರುತ್ತಿವೆ. ಆದರೆ, ನಮ್ಮ ಗುರಿ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವುದೇ ಆಗಿದೆ ಎಂದು ಒವೈಸಿ ಹೇಳಿದರು.
ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿದ್ದರೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೇವಲ ಬೇರೆಯವರಿಗೆ ಮತ ಹಾಕುತ್ತಾ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಟೀಕಿಸಿದರು.
ಈ ದೇಶದಲ್ಲಿ ನಾವು 70 ವರ್ಷದಿಂದ ಕೇವಲ ಮತ ಚಲಾಯಿಸುತ್ತ ಬಂದಿದ್ದೇವೆ. ಇದರಿಂದ ಮುಸ್ಲಿಮರು ಹೆಚ್ಚಿರುವ ಕ್ಷೇತ್ರದಲ್ಲೂ ಸರಿಯಾದ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ, ಸ್ವಚ್ಛತೆಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಯಕರಾರು ಆಕಾಶದಿಂದ ಉದುರುವುದಿಲ್ಲ, ನಿಮ್ಮ ನಡುವೆಯೇ ನಾಯಕರು ಹುಟ್ಟಬೇಕು ಎಂದು ಮುಸ್ಲಿಂರಿಗೆ ಒವೈಸಿ ಕರೆ ನೀಡಿದರು.

