ನವದೆಹಲಿ: 'ಸಜ್ಜಾದಾನಶೀನ್' ವಕ್ಫ್‌ನ ಆಧ್ಯಾತ್ಮಿಕ ಮುಖ್ಯಸ್ಥರಾಗಿರುವರು ಮತ್ತು 'ಸಜ್ಜಾದಾನಶೀನ್' ನೇಮಕವು ಧಾರ್ಮಿಕ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಮುತವಲ್ಲಿ' ಅವರ ಪಾತ್ರವು ವಕ್ಫ್‌ನ ಆಡಳಿತ ಮತ್ತು ನಿರ್ವಹಣೆಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ವಿಪುಲ್ ಎಂ.ಪಂಚೋಲಿ ಅವರ ಪೀಠವು ತಿಳಿಸಿದೆ.
1995ರ ವಕ್ಫ್ ಕಾಯ್ದೆಯ ಸೆಕ್ಷನ್ 32(2)(ಜಿ) ಅಡಿಯಲ್ಲಿ ನೇಮಕಗೊಳ್ಳುವ 'ಸಜ್ಜಾದಾನಶೀನ್', 'ಮುತವಲ್ಲಿ'ಯ ಕಾರ್ಯವನ್ನು ನಿರ್ವಹಿಸಬಹುದು. ಆದರೆ, ಸೆಕ್ಷನ್ 32(2)(ಜಿ) ಅಡಿಯಲ್ಲಿ ನೇಮಕಗೊಳ್ಳುವ 'ಮುತವಲ್ಲಿ', 'ಸಜ್ಜಾದಾನಶೀನ್' ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಸೂಚಿಸಲಾದ ಕರ್ತವ್ಯಗಳನ್ನು ಮಾತ್ರ ನಿರ್ವಹಿಸಬಹುದು ಎಂಬುದನ್ನು ಪೀಠವು ಗಮನಿಸಿತು.
'ಸಜ್ಜಾದಾನಶೀನ್' ಮತ್ತು 'ಮುತವಲ್ಲಿ' ಹುದ್ದೆಗಳು ಒಂದೇ ಎನ್ನಲಾಗದು ಎಂಬುದನ್ನು ಒತ್ತಿ ಹೇಳಿದ ಪೀಠ, 'ಮುಸ್ಲಿಮರ ಕಾನೂನು ಪ್ರಕಾರ, 'ಸಜ್ಜಾದಾನಶೀನ್' ವಿಶೇಷತೆಯೆಂದರೆ ಈ ಹುದ್ದೆಯಲ್ಲಿರುವ ವ್ಯಕ್ತಿ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಬಹುತೇಕ ಪ್ರಕರಣಗಳಲ್ಲಿ ಈ ಹುದ್ದೆ ವಂಶಪಾರಂಪರ್ಯವಾಗಿ ಬರುತ್ತದೆ ಎಂಬುದು ಸ್ಪಷ್ಟವಾಗಿದೆ' ಎಂದು ಹೇಳಿತು.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಹಜರತ್ ಅಖೀಲ್ ಶಾ ಖಾದ್ರಿ ದರ್ಗಾದ 'ಸಜ್ಜಾದಾನಶೀನ್' ಹುದ್ದೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಕರ್ನಾಟಕ ಹೈಕೋರ್ಟ್‌ನ 2024ರ ಏಪ್ರಿಲ್ 16ರ ತೀರ್ಪನ್ನು ಪ್ರಶ್ನಿಸಿ ಸೈಯದ್ ಮೊಹಮ್ಮದ್ ಆದಿಲ್ ಪಾಷಾ ಖಾದ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಭಾಗಶಃ ಅಂಗೀಕರಿಸಿತು.

