ಕೊಚ್ಚಿ: ಎರ್ನಾಕುಲಂ ಜಿಲ್ಲೆಯಲ್ಲಿ ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಜಾಗರೂಕರಾಗಿರುವಂತೆ ಜನರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಕುನ್ನುಕರ ಮತ್ತು ಚೆಂಗಮನಾಡ್ ಪಂಚಾಯತ್‌ಗಳಲ್ಲಿ ಚಿಕುನ್ ಗುನ್ಯಾ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ, ಒಂಬತ್ತು ಪ್ರಕರಣಗಳು ದೃಢಪಟ್ಟಿದ್ದು, 19 ಶಂಕಿತ ಪ್ರಕರಣಗಳಿವೆ ಎಂದು ಪ್ರಕಟಣೆ ತಿಳಿಸಿದೆ.
ಕುನ್ನುಕರದಲ್ಲಿ 24 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಆರು ದೃಢಪಟ್ಟಿವೆ. 18 ಶಂಕಿತ ಪ್ರಕರಣಗಳಾಗಿವೆ. ಚೆಂಗಮನಾಡ್‌ನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಮೂರು ದೃಢಪಟ್ಟಿವೆ, ಒಂದು ಶಂಕಿತ ಪ್ರಕರಣವಾಗಿದೆ.
ಸೊಳ್ಳೆಯಿಂದ ಹರಡುವ ವೈರಾಣು ರೋಗವನ್ನು ತಡೆಗಟ್ಟಲು ಪೀಡಿತ ಪ್ರದೇಶಗಳಲ್ಲಿ ತೀವ್ರ ಕಣ್ಗಾವಲು, ತಡೆಗಟ್ಟುವ ಕ್ರಮಗಳು ಮತ್ತು ಜಾಗೃತಿ ಅಭಿಯಾನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಠಾತ್ ಅಧಿಕ ಜ್ವರ, ತೀವ್ರ ಕೀಲು ನೋವು, ಕೈಗಳು, ಕಾಲುಗಳು ಮತ್ತು ಮೊಣಕಾಲುಗಳಲ್ಲಿ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ, ಸ್ನಾಯು ನೋವು, ತಲೆನೋವು, ಆಯಾಸ ಮತ್ತು ಕೆಲವು ಸಂದರ್ಭಗಳಲ್ಲಿ ಚರ್ಮದ ದದ್ದುಗಳೂ ಕಾಣಿಸಿಕೊಳ್ಖಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಂತಹ ಲಕ್ಷಣ ಕಂಡುಬಂದ ಕೂಡಲೇ ಜನರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸ್ವಯಂ ಔಷಧಿಗಳನ್ನು ತಪ್ಪಿಸುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೋವು ನಿವಾರಕಗಳನ್ನು ತೆಗೆದುಕೊಳ್ಳದಂತೆ ತಜ್ಞರು ಎಚ್ಚರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮತ್ತು ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಸೋಂಕಿತ ವ್ಯಕ್ತಿಗಳು ಹಗಲಿನ ವೇಳೆಯಲ್ಲಿಯೂ ಸೊಳ್ಳೆ ಪರದೆ ಬಳಸುವಂತೆಸೂಚಿಸಲಾಗಿದೆ, ಇದರಿಂದಾಗಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಬಹುದು. ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಮತ್ತು ಸರಿಯಾದ ವಿಶ್ರಾಂತಿ ಸಹ ಶಿಫಾರಸು ಮಾಡಲಾಗಿದೆ.
ಮನೆಗಳ ಸುತ್ತಮುತ್ತ, ಕಟ್ಟಡ ನಿರ್ಮಾಣ ಸ್ಥಳಗಳು, ರಬ್ಬರ್ ತೋಟಗಳು ಮತ್ತು ನೀರು ಸಂಗ್ರಹಿಸುವ ಪಾತ್ರೆಗಳಲ್ಲಿ ಸೊಳ್ಳೆ ಸಂತಾನೋತ್ಪತ್ತಿಗೆ ಅವಕಾಶ ಕೊಡದಂತೆ ಗಮನ ಹರಿಸಲು ಸೂಚಿಸಲಾಗಿದೆ.
ವಸತಿ ಅಥವಾ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡುಬಂದರೆ, ಕೇರಳ ಸಾರ್ವಜನಿಕ ಆರೋಗ್ಯ ಕಾಯ್ದೆ 2023ರ ಅಡಿಯಲ್ಲಿ ₹10,000ಗಳವರೆಗೆ ದಂಡ ವಿಧಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

