ಮುಳ್ಳೇರಿಯ: ಪುಂಡಿಕಾಯಿ ಕೃಷ್ಣ ಭಟ್ಟರು ಹಳೆ ತಲೆಮಾರಿನ ಅಪ್ಪಟ ಮದ್ಲೆಗಾರ. ಪ್ರಾತಃಸ್ಮರಣೀಯ ಕುದ್ರೆಕೂಡ್ಲು ರಾಮ ಭಟ್ಟರ ಶಿಷ್ಯರಾಗಿ, ಸಂಪ್ರದಾಯದ ಚೌಕಟ್ಟನ್ನು ವೃತ್ತಿಯಲ್ಲಿ ಕಾಣಿಸಿದವರು. ಮದ್ದಳೆಯಲ್ಲಿ ಅವರದು ಶುದ್ಧ ಪಾಠ. ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಶಿಷ್ಯರನ್ನು ರೂಪಿಸಿದ ಗುರು. ಮುಮ್ಮೇಳ ಹಾಗೂ ಹಿಮ್ಮೇಳದ ಅಪಸವ್ಯಗಳನ್ನು ಸಾತ್ವಿಕವಾಗಿ ಖಂಡಿಸುತ್ತಿದ್ದರು. ವಿವಿಧ ಮೇಳಗಳಲ್ಲಿ ನಾಲ್ಕು ದಶಕ ವ್ಯವಸಾಯ ಮಾಡಿದ್ದರು. ವೈಯಕ್ತಿವಾಗಿ ಬಡತನವಿದ್ದರೂ, ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಕಲಾವಿದ ಎಂದು ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.
ಕುಂಟಾರು ದೇವಳದ ವಠಾರದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ, ಕೂಡ್ಲು ಇದರ 'ರಜತ ರಂಗ'ದ ಹನ್ನೊಂದನೇ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಪುಂಡಿಕಾಯಿ ಕೃಷ್ಣಭಟ್ಟರ ಸಂಸ್ಮರಣೆಗೈದು ಮಾತನಾಡಿದರು.
ಅಭಿನಂದನ ಹಾಗೂ ಸ್ಮೃತಿ ಕೃತಿಗಳು ಯಕ್ಷಪ್ರಿಯರಿಗೆ ಒದಗುತ್ತಿಲ್ಲ. ಹಾಗಾಗಿ ಕೀರ್ತಿಶೇಷ ಕಲಾವಿದರ ಸಂಕ್ಷಿಪ್ತ ಪರಿಚಯವುಳ್ಳ ಹಸ್ತಕಾಕೃತಿಯ ಪುಸ್ತಿಕೆಗಳು ಪ್ರಕಟವಾಗಬೇಕು ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ, ವಿವಿಧ ರಂಗುರಂಗಿನ ಮಾಧ್ಯಮಗಳ ಭರಾಟೆಯಲ್ಲಿ ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನದ ಕೊಡುಗೆ ಗುರುತರ ಎಂದರು. ವೇದಿಕೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಪದ್ಮನಾಭ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುಂಡಿಕಾಯಿ ಕೃಷ್ಣ ಭಟ್ಟರ ಸುಪುತ್ರ ರಾಜೇಂದ್ರ ಭಟ್ಟರನ್ನು ಗೌರವಿಸಲಾಯಿತು. ರಜತ ರಂಗದ ಕಾರ್ಯದರ್ಶಿ ಸತ್ಯನಾರಾಯಣ ತಂತ್ರಿ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.
ಕು. ಸಂಹಿತಾಲಕ್ಷ್ಮೀ ಇವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ಸುರೇಶ್ ಮಣಿಯಾಣಿ ಸ್ವಾಗತಿಸಿ, ಅಧ್ಯಕ್ಷ ಗೋಪಾಲಕೃಷ್ಣ ಬಲ್ಯಾಯ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ 'ಸುಧನ್ವ ಮೋಕ್ಷ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ರಾಮಪ್ರಸಾದ್ ಮಯ್ಯ ಕೂಡ್ಲು (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ರಾಜೇಂದ್ರ ಭಟ್ ಪುಂಡಿಕಾಯಿ (ಚೆಂಡೆ); ಜಬ್ಬಾರ್ ಸಮೋ (ಅರ್ಜುನ), ನಾ. ಕಾರಂತ ಪೆರಾಜೆ (ಸುಧನ್ವ), ಗೋಪಾಲಕೃಷ್ಣ ನಾಯಕ್ ಸೂರಂಬೈಲು (ಕೃಷ್ಣ) - ಭಾಗವಹಿಸಿದ್ದರು.

.jpg)
.jpg)
.jpg)
