ಇಂದೋರ್: ಮಧ್ಯಪ್ರದೇಶದ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ 'ವಂದೇ ಮಾತರಂ' ಗೀತೆ ಹಾಡುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ವಾಗ್ವಾದ ನಡೆದಿದೆ. ಕಾಂಗ್ರೆಸ್ ಕೌನ್ಸಿಲರ್‌ಗಳಾದ ಫೌಜಿಯಾ ಶೇಖ್ ಆಲಿಮ್ ಮತ್ತು ರುಬಿನಾ ಇಕ್ಬಾಲ್ ಅವರು "ವಂದೇ ಮಾತರಂ ಹಾಡಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ" ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಿಡಿ ಹಚ್ಚಿದೆ.
ಸಭೆಯ ಆರಂಭದಲ್ಲಿ ವಂದೇ ಮಾತರಂ ಹಾಡುವಾಗ ಕಾಂಗ್ರೆಸ್‌ನ ಈ ಇಬ್ಬರು ಸದಸ್ಯೆಯರು ಅದರಿಂದ ದೂರ ಉಳಿದರು. ಇದನ್ನು ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧಿಸಿ, ಇದು ರಾಷ್ಟ್ರೀಯ ಭಾವನೆಗೆ ಧಕ್ಕೆ ತರುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯೆಯರು, "ಸಭೆಯಲ್ಲಿ ವಂದೇ ಮಾತರಂ ಹಾಡಲೇಬೇಕು ಎಂದು ಹೇಳುವ ಕಾನೂನು ಬದ್ಧ ನಿಯಮ ಎಲ್ಲಿದೆ? ಲಿಖಿತ ಆದೇಶ ತೋರಿಸಿ" ಎಂದು ಸವಾಲು ಹಾಕಿದರು. ಗದ್ದಲ ತಾರಕಕ್ಕೇರಿದಾಗ ಸಭಾಧ್ಯಕ್ಷ ಮುನ್ನಾಲಾಲ್ ಯಾದವ್ ಅವರು ಫೌಜಿಯಾ ಅವರನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಅಲ್ಲಾ ನಮಗೆ ಒಬ್ಬನೇ ದೇವರು
ಸಭೆಯಿಂದ ಹೊರಬಂದ ನಂತರ ಮಾತನಾಡಿದ ರುಬಿನಾ ಇಕ್ಬಾಲ್, "ನಮ್ಮ ನಂಬಿಕೆಯ ಪ್ರಕಾರ ಅಲ್ಲಾಹುವೇ ಏಕದೈವ. 'ವಂದೇ' ಎಂದರೆ ನಮಸ್ಕರಿಸುವುದು ಅಥವಾ ಆರಾಧಿಸುವುದು ಎಂದರ್ಥ. ನಮಗೆ ಅಲ್ಲಾಹನನ್ನು ಬಿಟ್ಟು ಬೇರೆ ಯಾವುದನ್ನೂ ಆರಾಧಿಸಲು ಸಾಧ್ಯವಿಲ್ಲ. ನಮಗೆ 'ಸಾರೆ ಜಹಾಂ ಸೆ ಅಚ್ಛಾ' ಹಾಡಲು ಸಂತೋಷವಿದೆ, ಆದರೆ ವಂದೇ ಮಾತರಂ ಹಾಡುವುದು ಇಸ್ಲಾಂನಲ್ಲಿ ನಿಷಿದ್ಧ" ಎಂದು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೆ, "ಇಂದೋರ್‌ನಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಬಿಜೆಪಿ ಅಡ್ಡಿಪಡಿಸುತ್ತದೆ. ಹಾಗಿದ್ದರೆ ಅವರು ಇರಾನ್‌ನಿಂದ ಬರುವ ತೈಲವನ್ನು ಬಳಸುವುದನ್ನೂ ನಿಲ್ಲಿಸಲಿ" ಎಂದು ಕಿಡಿಕಾರಿದರು.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೂ ಆಕ್ರೋಶ
ರುಬಿನಾ ಅವರು ತಮ್ಮದೇ ಪಕ್ಷವಾದ ಕಾಂಗ್ರೆಸ್ ವಿರುದ್ಧವೂ ಅಸಮಾಧಾನ ಹೊರಹಾಕಿದರು. "ಕಾಂಗ್ರೆಸ್ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದೆ. ಪಕ್ಷ ನಮ್ಮನ್ನು ಹೊರಹಾಕಿದರೆ ನಾವು ಪಕ್ಷೇತರರಾಗಿ ಸ್ಪರ್ಧಿಸುತ್ತೇವೆ ಅಥವಾ ಓವೈಸಿ ಅವರ ಪಕ್ಷ (AIMIM) ಸೇರುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಕ್ರಿಯೆ
"ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲೇ ಮೊದಲು ವಂದೇ ಮಾತರಂ ಹಾಡಲಾಗಿತ್ತು. ಅಶ್ಫಾಕುಲ್ಲಾ ಖಾನ್ ಅವರಂತಹ ಕ್ರಾಂತಿಕಾರಿಗಳು ವಂದೇ ಮಾತರಂ ಎನ್ನುತ್ತಲೇ ನೇಣುಗಂಬ ಏರಿದ್ದರು. ಇವರು ದೇಶದ ವೀರರಿಗೆ ಅವಮಾನ ಮಾಡುತ್ತಿದ್ದಾರೆ" ಎಂದು ಬಿಜೆಪಿ ನಾಯಕ ಸುಮಿತ್ ಮಿಶ್ರಾ ಕಿಡಿಕಾರಿದ್ದಾರೆ.
ಈ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ಕಠಿಣ ಪದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. "ದೇಶದ ಹಿತಾಸಕ್ತಿ ಕಾಪಾಡಲಾಗದವರು ಮತ್ತು ವಂದೇ ಮಾತರಂ ಹಾಡಲು ಸಾಧ್ಯವಾಗದವರು ಪಾಕಿಸ್ತಾನಕ್ಕೆ ಹೋಗಿ ಬದುಕಲಿ. ಇಂತಹ ಅಪಕ್ವ ವರ್ತನೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ. ಸದ್ಯ ಇಬ್ಬರೂ ಕೌನ್ಸಿಲರ್‌ಗಳ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ ನಡೆಸಿದ್ದು, ಇಂದೋರ್ ರಾಜಕೀಯದಲ್ಲಿ ಈ ವಿವಾದ ಭಾರಿ ಸಂಚಲನ ಮೂಡಿಸಿದೆ.

