ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಡಳಿತ ವಿರೋಧಿ ಅಲೆ, ಕಾನೂನು ಸುವ್ಯವಸ್ಥೆ ವೈಫಲ್ಯ ಹಾಗೂ ಸ್ಥಳೀಯ ಸಮಸ್ಯೆಗಳ ಜತೆಗೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.ಇದರೊಂದಿಗೆ, ಹುಮಾಯೂನ್ ಕಬೀರ್ ಹಾಗೂ ಅಸಾದುದ್ದೀನ್ ಓವೈಸಿ ಅವರ ಪಕ್ಷಗಳ ಮೈತ್ರಿಯಿಂದಾಗಿ ಟಿಎಂಸಿಗೆ ಮತ ವಿಭಜನೆಯ ಆತಂಕ ಎದುರಾಗಿದೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬ್ರಿ ಮಸೀದಿ ಮಾದರಿಯಲ್ಲೇ ಮಸೀದಿ ನಿರ್ಮಾಣಕ್ಕೆ ಡಿಸೆಂಬರ್ 6ರಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಘೋಷಿಸಿ, ಭಾರಿ ವಿವಾದಕ್ಕೆ ಕಾರಣವಾಗಿದ್ದ ಭರತ್ಪುರ್ ಶಾಸಕ ಹುಮಾಯೂನ್ ಕಬೀರ್ ಅವರನ್ನು ಟಿಎಂಸಿಯಿಂದ ಕಳೆದ ವರ್ಷ ಅಮಾನತು ಮಾಡಲಾಗಿತ್ತು. ಆ ಬಳಿಕ ಕಬೀರ್ ಅವರು ಆಮ್ ಜನತಾ ಉನ್ನಯನ್ ಪಕ್ಷ (ಎಜೆಯುಪಿ) ಸ್ಥಾಪಿಸಿದ್ದರು. ಅವರ ಪಕ್ಷವು ಓವೈಸಿ ಅವರ ಎಐಎಂಐಎಂ ಪಕ್ಷದೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಸುಮಾರು 180 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಣಿಯಾಗಿದೆ. 100 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನುಕಣಕ್ಕಿಳಿಸುವುದಾಗಿ ಉಭಯ ನಾಯಕರು ಘೋಷಿಸಿದ್ದಾರೆ. 'ಟಿಎಂಸಿಯ ದುರಾಡಳಿತಕ್ಕೆ ಕೊನೆ ಹಾಡುವುದೇ ತಮ್ಮ ಗುರಿ' ಎಂದು ಕಬೀರ್ ಗುಡುಗಿದ್ದಾರೆ. 'ಈ ಮೈತ್ರಿಕೂಟವು ಬಿಜೆಪಿಯ ಬಿ-ಟೀಮ್' ಎಂದು ಟಿಎಂಸಿ ನಾಯಕರು ಲೇವಡಿ ಮಾಡಿದ್ದಾರೆ.
2011ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇ 27ರಷ್ಟಿದೆ. ಮಾಲ್ದಾ, ಮುರ್ಷಿದಾಬಾದ್ ಮತ್ತು ಉತ್ತರ ದಿನಾಜ್ಪುರ ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 50ರಷ್ಟಿದ್ದರೆ, ದಕ್ಷಿಣ 24 ಪರಗಣಗಳು ಮತ್ತು ಬಿರ್ಭುಮ್ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಂಖ್ಯೆ ಶೇ 35ರಷ್ಟು. ಈ ಭಾಗದ 90 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಮುಸ್ಲಿಮರು ಟಿಎಂಸಿಯ ಸಾಂಪ್ರದಾಯಿಕ ಬೆಂಬಲಿಗರು. 2021ರ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ 75 ಕ್ಷೇತ್ರಗಳಲ್ಲಿ ಟಿಎಂಸಿ ಜಯ ಗಳಿಸಿತ್ತು. ಕಳೆದ ಮೂರು ಚುನಾವಣೆಗಳಲ್ಲಿ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಲು ಮುಸ್ಲಿಂ ಮತಗಳೇ ಪ್ರಮುಖ ಕಾರಣ. ಇನ್ನೊಂದೆಡೆ, ಕಾಂಗ್ರೆಸ್, ಎಡಪಕ್ಷಗಳೂ ಮುಸ್ಲಿಂ ಮತಗಳ ಮೇಲೆ ಪ್ರಮುಖವಾಗಿ ಕಣ್ಣಿಟ್ಟಿವೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ 91 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ಕೈಬಿಡಲಾಗಿದೆ. ಎಸ್ಐಆರ್ನಿಂದಾಗಿಪ್ರತಿ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 15 ಸಾವಿರದಷ್ಟು ಕಡಿಮೆ ಆಗಿದೆ. ರಾಜ್ಯದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಚುನಾವಣಾ ಆಯೋಗವು ಈ ಪ್ರಕ್ರಿಯೆ ನಡೆಸಿದೆ ಎಂದು ಟಿಎಂಸಿ ನಾಯಕರ ತಕರಾರು. ಒಂದು ಕಡೆಯಲ್ಲಿ ಎಸ್ಐಆರ್, ಇನ್ನೊಂದು ಕಡೆಯಲ್ಲಿ ಓವೈಸಿ-ಕಬೀರ್ ಮೈತ್ರಿ; ಇದರಿಂದ ನೇರ ಹೊಡೆತ ಟಿಎಂಸಿಯ ಮತ ಬ್ಯಾಂಕ್ಗೆ. ಈ ಬೆಳವಣಿಗೆಗಳಿಂದಾಗಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಕಣ ಕಡು ಕಠಿಣ ಆಗಿದೆ.
2021ರ ಚುನಾವಣೆಯಲ್ಲಿ 35 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 5 ಸಾವಿರ ಮತಗಳಿಗಿಂತ ಕಡಿಮೆ. 70 ಕ್ಷೇತ್ರಗಳಲ್ಲಿ ಜಯದ ಅಂತರ 15 ಸಾವಿರ ಮತಗಳಿಗಿಂತ ಕಡಿಮೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 213 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ, ಬಿಜೆಪಿ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಈ ಸಲ ಕಳೆದ ಬಾರಿಗಿಂತ ಹೆಚ್ಚು ಆಕ್ರಮಣಕಾರಿಯಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಪಕ್ಷದ ಸಂಘಟನೆ ಬಲವಾಗುತ್ತಿದೆ. ಒಂದು ವೇಳೆ, ಕಬೀರ್ ಮತ್ತು ಓವೈಸಿ ಜೋಡಿಯು ಮುಸ್ಲಿಂ ಮತಗಳಲ್ಲಿ ಒಂದು ಸಣ್ಣ ಪಾಲನ್ನು (ಶೇ 2-5) ಸೆಳೆಯುವಲ್ಲಿ ಯಶಸ್ವಿಯಾದರೂ, ಬಿಗಿಯಾದ ಸ್ಪರ್ಧೆಯ ಕ್ಷೇತ್ರಗಳಲ್ಲಿ ಟಿಎಂಸಿಗೆ ಭಾರಿ ಹಾನಿ ಉಂಟುಮಾಡಬಹುದು.

