ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತೆ ವಾಟ್ಸ್ಆ್ಯಪ್ "ಯೂಸರ್‌ನೇಮ್" ಫೀಚರ್ ಅನ್ನು ಪರಿಚಯಿಸಿದೆ. ಈಗ ನಿಮ್ಮ ಫೋನ್ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳದೆಯೇ ಚಾಟ್ ಮಾಡಬಹುದು. ಅದು ಯಾವರೀತಿ ಎಂಬುದು ತಿಳಿಯೋಣ ಬನ್ನಿ..
ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗಾಗಿ ಕೆಲವು ಸಮಯದಿಂದ ಹೊಸ ಗೌಪ್ಯತೆ (Privacy) ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಈ ವೈಶಿಷ್ಟ್ಯವು ಈಗ ಹಂತ ಹಂತವಾಗಿ ಬಳಕೆದಾರರಿಗೆ ಲಭ್ಯವಾಗಲು ಪ್ರಾರಂಭಿಸಿದೆ. 2026ರಲ್ಲಿ ಬರುವ ಈ ಫೀಚರ್ಗಾಗಿ ಸಿದ್ಧರಾಗಿರಬೇಕೆಂದು ಮನವಿ ಮಾಡುತ್ತಾ ಕಂಪನಿ ವ್ಯವಹಾರ ಖಾತೆದಾರರಿಗೆ (Business Account Holders) ನವೆಂಬರ್ 2025ರಲ್ಲಿ ಇ-ಮೇಲ್ ಕಳುಹಿಸಿತು. ಈಗ ವರದಿಗಳ ಪ್ರಕಾರ, ವಾಟ್ಸ್ಆ್ಯಪ್ ಆಯ್ದ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಅನನ್ಯ ಬಳಕೆದಾರ ಹೆಸರುಗಳನ್ನು ರಚಿಸಲು ಅನುವು ಮಾಡಿಕೊಡುತ್ತಿದೆ. ಕಂಪನಿಯು ಈ ವೈಶಿಷ್ಟ್ಯವನ್ನು ಸಾಧ್ಯವಾದಷ್ಟು ಬೇಗ ತನ್ನ ಉಳಿದ ಬಳಕೆದಾರರಿಗೆ ವಿಸ್ತರಿಸಲು ಯೋಜಿಸಿದೆ.
ವಾಟ್ಸಾಪ್ ಯೂಸರ್‌ನೇಮ್ ಫೀಚರ್: ಈ ವೈಶಿಷ್ಟ್ಯದ ಪ್ರಾಥಮಿಕ ಪ್ರಯೋಜನ ಎಂದರೆ ಗೌಪ್ಯತೆ. ಇನ್ಸ್ಟಾಗ್ರಾಂ ಅಥವಾ ಇತರ ಸಾಮಾಜಿಕ ವೇದಿಕೆಗಳಂತೆ ಬಳಕೆದಾರರು ಈಗ ತಮ್ಮ ಫೋನ್ ಸಂಖ್ಯೆಯ ಬದಲಿಗೆ ತಮ್ಮ "Username" ಹಂಚಿಕೊಳ್ಳುವ ಮೂಲಕ ಇತರರೊಂದಿಗೆ ಕನೆಕ್ಟ್ ಆಗಬಹುದು. ಒಂದು ವೇಳೆ ಹೊಸಬರು ನಿಮಗೆ ಮೆಸೇಜ್ ಮಾಡಬೇಕಾದರೆ ಫೋನ್ ನಂಬರ್ನ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಕೇವಲ ಯೂಸರ್‌ನೇಮ್ ಉಪಯೋಗಿಸಿದ್ರೆ ಸಾಕು. ತಮ್ಮ ಫೋನ್ ನಂಬರ್ಗಳನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡದವರಿಗೆ ವಾಟ್ಸ್ಆ್ಯಪ್ನಲ್ಲಿನ ಈ ಬದಲಾವಣೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ವಾಟ್ಸ್ಆ್ಯಪ್ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ವೇದಿಕೆಯಾದ WABetaInfo ಪ್ರಕಾರ, ಈ ಹೊಸ ವೈಶಿಷ್ಟ್ಯದ ರೋಲ್‌ಔಟ್ ಪ್ರಕ್ರಿಯೆಯು ಪ್ರಸ್ತುತ ಅದರ ಆರಂಭಿಕ ಹಂತದಲ್ಲಿದೆ. ನಿಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡುವ ಮೂಲಕ ಈ ಹೊಸ ವೈಶಿಷ್ಟ್ಯವು ನಿಮ್ಮ ಖಾತೆಗೆ ಲಭ್ಯವಿದೆಯೇ ಎಂದು ನೀವು ಪರಿಶೀಲಿಸಬಹುದು. ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ 'ಯೂಸರ್‌ನೇಮ್' ವೈಶಿಷ್ಟ್ಯವು ಕಾಣಿಸಿಕೊಂಡರೆ ನೀವು ನಿಮಗಾಗಿ ವಿಶಿಷ್ಟ ಯೂಸರ್‌ನೇಮ್ ಅನ್ನು ರಚಿಸಬಹುದು. ಆದರೆ, ಯೂಸರ್‌ನೇಮ್ ಅನ್ನು ಕ್ರಿಯೆಟ್ ಮಾಡಲು ವಾಟ್ಸಾಪ್ ಕೆಲವು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಸಹ ಸ್ಥಾಪಿಸಿದೆ.
ವಾಟ್ಸಾಪ್ ಯೂಸರ್‌ನೇಮ್ ಕ್ರಿಯೆಟ್ ಮಾಡುವ ನಿಯಮಗಳು:
- ಯೂಸರ್‌ನೇಮ್ 3 ರಿಂದ 35 ಅಕ್ಷರಗಳನ್ನು ಒಳಗೊಂಡಿರಬೇಕು.
- ಇದು ಕನಿಷ್ಠ ಒಂದು ಅಕ್ಷರವನ್ನು (ಅಲ್ಫಾಬೆಟಿಕಲ್ ಕ್ಯಾರೆಕ್ಟರ್) ಹೊಂದಿರಬೇಕು.
- ನೀವು ಕೇವಲ ಸಂಖ್ಯೆಗಳು ಅಥವಾ ವಿಶೇಷ ಅಕ್ಷರಗಳನ್ನು ಮಾತ್ರ ಬಳಸಿ ಯೂಸರ್‌ನೇಮ್ ಕ್ರಿಯೆಟ್ ಮಾಡಲು ಸಾಧ್ಯವಿಲ್ಲ.
- ನೀವು ಅಂಡರ್‌ಸ್ಕೋರ್‌ಗಳು (_), ಸಣ್ಣ ಅಕ್ಷರಗಳು ಮತ್ತು ಪೂರ್ಣವಿರಾಮಗಳನ್ನು (.) ಬಳಸಬಹುದು.
- ಯೂಸರ್‌ನೇಮ್ "www." ನೊಂದಿಗೆ ಪ್ರಾರಂಭವಾಗಬಾರದು ಮತ್ತು .com, .in ಅಥವಾ .net ನಂತಹ ಡೊಮೇನ್ ವಿಸ್ತರಣೆಗಳೊಂದಿಗೆ ಕೊನೆಗೊಳ್ಳಬಾರದು.
ಯೂಸರ್‌ನೇಮ್ ನಿಯಮಗಳ ಹೈಲೈಟ್ಸ್: ಮತ್ತೊಂದು ನಿರ್ಣಾಯಕ ಅಂಶವೆಂದರೆ ನಿಮ್ಮ ಯೂಸರ್‌ನೇಮ್ ಎಲ್ಲಾ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ (WhatsApp, Instagram ಮತ್ತು Facebook) ವಿಶಿಷ್ಟವಾಗಿರಬೇಕು. ನೀವು ಈಗಾಗಲೇ Instagram ನಲ್ಲಿ ಯೂಸರ್‌ನೇಮ್ ಅನ್ನು ಹೊಂದಿದ್ದರೆ ನೀವು ವಾಟ್ಸ್ಆ್ಯಪ್ನಲ್ಲಿಯೂ ಅದೇ ಯೂಸರ್‌ನೇಮ್ ಅನ್ನು ಬಳಸಬಹುದು. ಆದ್ರೆ ನೀವು "Accounts Center"ನ ಮೂಲಕ ಈ ಎರಡು ಖಾತೆಗಳನ್ನು ಲಿಂಕ್ ಮಾಡಬೇಕಾಗುತ್ತದೆ. ವಾಟ್ಸ್ಆ್ಯಪ್ ಹೆಚ್ಚು ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಮೆಟಾ ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಇದನ್ನು ಪರಿಗಣಿಸಬಹುದು. ಫೋನ್ ಸಂಖ್ಯೆಯ ಬದಲಿಗೆ ಯೂಸರ್‌ನೇಮ್ ಅನ್ನು ಹಂಚಿಕೊಳ್ಳುವುದು ಗೌಪ್ಯತೆಯ ಮಟ್ಟವನ್ನು ಹೆಚ್ಚಿಸುವುದಲ್ಲದೇ ಹೊಸ ಸಂಪರ್ಕಗಳನ್ನು ಸೇರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

