ಚೆನ್ನೈ: ಸೈಪ್ರಸ್ ನಲ್ಲಿ ನಡೆದ ಫಿಡೆ ಮಹಿಳೆಯರ ಕ್ಯಾಂಡಿಡೇಟ್ಸ್ ಚೆಸ್ 2026ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಗ್ರಾಂಡ್ಮಾಸ್ಟರ್ ಆರ್. ವೈಶಾಲಿ ಭಾನುವಾರ ಮುಂಜಾನೆ ತವರಿಗೆ ಮರಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳು ಹಾಗೂ ಸೂಕ್ತವಲ್ಲದ ಸಮಯದಲ್ಲಿ ಅವರು ಆಗಮಿಸಿದ್ದರಿಂದ ಅವರ ಸ್ವಾಗತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯವಾಗಲಿಲ್ಲ.
ಆದರೂ ವೆಳ್ಳಮಾಲ್ ನ ಸುಮಾರು 50 ವಿದ್ಯಾರ್ಥಿಗಳು ಅವರನ್ನು ಸ್ವಾಗತಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ನೂತನ ಚೆಸ್ ಚಾಂಪಿಯನ್ ಗೆ ಸ್ವಾಗತ ಕೋರುವ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ವೈಶಾಲಿಯನ್ನು ಅಭಿನಂದಿಸಿದರು. ಅವರು ವೈಶಾಲಿ ಜೊತೆ ಕೇಕ್ ಕತ್ತರಿಸಿ, ಚಿತ್ರಗಳನ್ನು ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಂದೆ ರಮೇಶ್ ಬಾಬು ಸೇರಿದಂತೆ ವೈಶಾಲಿಯ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
2013ರಲ್ಲಿ ವಿಶ್ವನಾಥನ್ ಆನಂದ್ ಚೆನ್ನೈಯಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅದನ್ನು ನೋಡಲು ಅಂದು 12 ವರ್ಷದ ವೈಶಾಲಿ ಬಂದಿದ್ದರು. ಹದಿಮೂರು ವರ್ಷಗಳ ಬಳಿಕ ವೈಶಾಲಿ ಈಗ ವಿಶ್ವನಾಥನ್ ಅವರ ಅಂದಿನ ಸ್ಥಾನದಲ್ಲಿದ್ದಾರೆ; ಅವರನ್ನು ಸ್ವಾಗತಿಸಲು ಜನರು ಬಂದಿದ್ದಾರೆ.
''ಇದು ನನ್ನ ಕನಸು ನನಸಾದ ಕ್ಷಣ. ನನಗೆ ತುಂಬಾ ಸಂತೋಷವಾಗಿದೆ. ನಾನು ಅನೇಕ ವಿಶ್ವ ಚಾಂಪಿಯನ್ ಶಿಪ್ ಪಂದ್ಯಗಳನ್ನು ನೋಡಿದ್ದೇನೆ. ಈಗ ನಾನು ಅಂಥ ಪಂದ್ಯಗಳಲ್ಲಿ ಆಡಲಿದ್ದೇನೆ. ಅದನ್ನು ಎದುರು ನೋಡುತ್ತಿದ್ದೇನೆ'' ಎಂದು 'ಸ್ಪೋರ್ಟ್ಸ್ಸ್ಟಾರ್'ಗೆ ನೀಡಿದ ಸಂದರ್ಶನದಲ್ಲಿ ವೈಶಾಲಿ ತಿಳಿಸಿದ್ದಾರೆ.
ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದವರು ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯುತ್ತಾರೆ.

