ಲಕ್ನೋ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಸಂಸತ್ತಿನಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ನಡವಳಿಕೆ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಸಮ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕ್ಷೇತ್ರಗಳ ಪುನರ್ವಿಂಗಡಣೆಯ ನಂತರ ಮಹಿಳಾ ಕೋಟಾವನ್ನು ಜಾರಿಗೆ ತರಲು ಪ್ರಯತ್ನಿಸುವ ಮಸೂದೆಗೆ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸಿತು. ಲೋಕಸಭೆಯಲ್ಲಿ ಮಸೂದೆಗೆ ಸೋಲಾಗಿದ್ದಕ್ಕೆ ಸಮಾಜವಾದಿ ಪಕ್ಷ ಸೇರಿದಂತೆ ಇಂಡಿಯಾ ಒಕ್ಕೂಟದ ನಡೆಗೆ ಯೋಗಿ ಆದಿತ್ಯನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಸಂಸತ್‌ನಲ್ಲಿ ಕಾಂಗ್ರೆಸ್, ಎಸ್‌ಪಿ, ಟಿಎಂಸಿ ಮತ್ತು ಡಿಎಂಕೆ ವರ್ತಿಸಿದ ರೀತಿಯು ದ್ರೌಪದಿಯ ವಸ್ತ್ರಾಪಹರಣ ದೃಶ್ಯದಂತಿತ್ತು. ವಿರೋಧ ಪಕ್ಷದ ನಾಯಕರು ಮಾಡಿದ ಬೇಜವಾಬ್ದಾರಿ ಹೇಳಿಕೆಗಳು, ಅವರು ಪ್ರದರ್ಶಿಸಿದ ನಡವಳಿಕೆ ಎಲ್ಲರಿಗೂ ತಿಳಿದಿದೆ ಎಂದು ಸಿಎಂ ಕೆಂಡಕಾರಿದ್ದಾರೆ.

