ಇರಾನ್ ನೌಕಾಪಡೆಯ ಕಮಾಂಡರ್ ಶಹರಾಮ್ ಇರಾನಿ, ಇಸ್ಲಾಮಿಕ್ ಗಣರಾಜ್ಯವು ತಮ್ಮ ಬಳಿ ಈಗಾಗಲೇ ಸಿದ್ಧವಾಗಿರುವ ಶಕ್ತಿಶಾಲಿ ಆಯುಧದೊಂದಿಗೆ ಶತ್ರುಗಳನ್ನು ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ. "ಅವರಿಗೆ ಹೃದಯಾಘಾತವಾಗದಿರಲಿ ಎಂದು ನಾನು ಆಶಿಸುತ್ತೇನೆ" ಎಂದು ಅವರು ಎಚ್ಚರಿಸಿದ್ದಾರೆ.
ಹೆಚ್ಚುತ್ತಿರುವ ವಾಕ್ಸಮರದ ನಡುವೆ, ಇರಾನ್ ಮಿಲಿಟರಿ ತನ್ನ ವಿರುದ್ಧದ ಯುದ್ಧವು ತ್ವರಿತವಾಗಿ ಅಂತ್ಯಗೊಳ್ಳಬಹುದು ಎಂಬ ಶತ್ರುಗಳ ನಿರೀಕ್ಷೆಯನ್ನು ತಳ್ಳಿಹಾಕಿದೆ. "ಯುದ್ಧವು ಮೂರು ದಿನಗಳಿಂದ ಒಂದು ವಾರದೊಳಗೆ ಮುಗಿಯಬಹುದು ಎಂದು ಶತ್ರುಗಳು ಭಾವಿಸಿದ್ದರು. ಆದರೆ, ಆ ಅಂದಾಜುಗಳು ಈಗ ಮಿಲಿಟರಿ ವಲಯದಲ್ಲಿ ತಮಾಷೆಯ ವಿಷಯವಾಗಿವೆ" ಎಂದು ಶಹರಾಮ್ ಇರಾನಿ ವ್ಯಂಗ್ಯವಾಡಿದ್ದಾರೆ.
ಫೆಬ್ರವರಿ 28ರಿಂದ ಉದ್ವಿಗ್ನತೆ ಬಳಿಕ, ಇರಾನ್ ಸಶಸ್ತ್ರ ಪಡೆಗಳು ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ಮತ್ತು ಇಸ್ರೇಲಿ ನೆಲೆಗಳ ಮೇಲೆ ಕನಿಷ್ಠ 100 ಪ್ರತೀಕಾರದ ದಾಳಿಗಳನ್ನು ನಡೆಸಿವೆ ಎಂದು ಅವರು ಹೇಳಿದ್ದಾರೆ. ಈ ದಾಳಿಗಳು ವಿಶಾಲ ಭೌಗೋಳಿಕ ವ್ಯಾಪ್ತಿಯ ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ವಿವರಿಸಿದ್ದಾರೆ.
"ಅಮೆರಿಕದ ಹಠಮಾರಿತನ ಮುಂದುವರಿದರೆ ಮತ್ತು ಇರಾನ್ ನ ಷರತ್ತುಗಳನ್ನು ತಿರಸ್ಕರಿಸಿದರೆ, ಶತ್ರುಗಳು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ," ಎಂದು ಇರಾನಿ ಎಚ್ಚರಿಸಿದ್ದಾರೆ.
ಅಮೆರಿಕ ತನ್ನ ಸೈನಿಕ ನಿಯೋಜನೆಯನ್ನು ವಿಸ್ತರಿಸುತ್ತಿದ್ದು, ಹೆಚ್ಚುವರಿ ಯುದ್ಧನೌಕೆಗಳು ಮತ್ತು ಕ್ಷಿಪಣಿ ಉಡಾವಣೆ ವ್ಯವಸ್ಥೆಗಳನ್ನು ನಿಯೋಜಿಸಿದೆ. ಆರಂಭಿಕ ನೌಕಾ ದಾಳಿಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. "ಆದರೆ, ಆ ಕ್ರಮಗಳು ಪರಿಣಾಮಕಾರಿಯಾಗಿಲ್ಲ" ಎಂದು ಇರಾನಿ ಪ್ರತಿಪಾದಿಸಿದ್ದಾರೆ.

