ವಾಷಿಂಗ್ಟನ್: ಅಪರಿಚಿತ ಹಾರುವ ವಸ್ತುಗಳಿಗೆ (ಯುಎಫ್‌ಒ) ಸಂಬಂಧಿಸಿದ ದಾಖಲೆಗಳನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿರುವ ಟ್ರಂಪ್, 'ನೀವು ನಂಬಲು ಸಾಧ್ಯವಾಗದಂತಹ ಹಲವು ವಿಚಾರಗಳ ಬಗ್ಗೆ ಪೈಲಟ್‌ಗಳೊಂದಿಗೆ ಮಾತುಕತೆ ನಡೆಸಿದ್ದೇನೆ' ಎಂದಿದ್ದಾರೆ.
ಇದೇ ವಿಚಾರವಾಗಿ ಫೆಬ್ರುವರಿಯಲ್ಲೂ ಟ್ರಂಪ್ ಮಾತನಾಡಿದ್ದರು. ಅದಕ್ಕೆ ಪೂರಕವಾಗಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದುಕೊಂಡಿದ್ದೇನೆ. ನನ್ನ ಆಡಳಿತದ ಮೊದಲ ಅವಧಿಯಲ್ಲಿ ಕೆಲವು ಪೈಲಟ್‌ಗಳನ್ನು ನಾನು ಸಂದರ್ಶಿಸಿದ್ದೆ. ಯಾರೂ ನಂಬಲಸಾಧ್ಯವಾದ ಹಲವು ಸಂಗತಿಗಳನ್ನು ಕಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗಾಗಿ, ನೀವು ಆ ಎಲ್ಲ ವಿಚಾರಗಳನ್ನು ಓದಲಿದ್ದೀರಿ' ಎಂದು ಹೇಳಿದ್ದಾರೆ.
ಚಂದ್ರನ ಸುತ್ತ ಬಾಹ್ಯಾಕಾಶ ನೌಕೆಯಲ್ಲಿ 10 ದಿನಗಳ ಪ್ರಯಾಣ ನಡೆಸಿ ವಾಪಸ್ ಆಗಿರುವ ಆರ್ಟೆಮಿಸ್-2 ಯೋಜನೆಯ ನಾಲ್ವರು ಗಗನಯಾತ್ರಿಗಳಿಗೆ ಟ್ರಂಪ್ ಅವರು ಏಪ್ರಿಲ್ 11ರಂದು ಆತಿಥ್ಯ ವಹಿಸಿದ್ದರು.
ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ನಂಬಿಕೆ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ (ಫೆಬ್ರುವರಿಯಲ್ಲಿ) ಟ್ರಂಪ್ ಅವರು, 'ಯುಎಫ್‌ಒ ಸಂಬಂಧಿತ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ' ಎಂದಿದ್ದರು.
ಯುಟ್ಯೂಬರ್ ಬ್ರಿಯಾನ್ ಟೇಲರ್ ಕೊಹೆನ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ, 'ಅವು (ಅನ್ಯಗ್ರಹ ಜೀವಿಗಳು) ಇರುವುದು ನಿಜ. ಆದರೆ, ನಾನು ನೋಡಿಲ್ಲ. ಅವುಗಳನ್ನು ಏರಿಯಾ-51 ರಲ್ಲಿ ಇರಿಸಿಲ್ಲ' ಎಂದು ಒಬಾಮ ಹೇಳಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಟ್ರಂಪ್, 'ಅವರು (ಬರಾಕ್ ಒಬಾಮ) ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಮಾಡಬಾರದಿತ್ತು' ಎಂದು ಗುಡುಗಿದ್ದರು. ಕೆಲಹೊತ್ತಿನಲ್ಲೇ, ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

