ವಿಶ್ವಸಂಸ್ಥೆ: 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವುದಾದರೆ, ಪರಮಾಧಿಕಾರ ಹೊಂದಿರುವ ಕಾಯಂ ಸದಸ್ಯರ ಸಂಖ್ಯೆಯನ್ನು ಅಧಿಕಗೊಳಿಸಬೇಕು. ಇಲ್ಲವಾದಲ್ಲಿ ವಿಶ್ವಸಂಸ್ಥೆಯಲ್ಲಿ ಈಗಾಗಲೇ ಇರುವ ಅಧಿಕಾರದ ಅಸಮಾನತೆಯು ಇನ್ನಷ್ಟು ಹೆಚ್ಚಾಗಲಿದೆ' ಎಂದು ಭಾರತ ಪ್ರತಿಪಾದಿಸಿದೆ.
ಸರ್ಕಾರಗಳ ನಡುವಿನ ಮಾತುಕತೆ (ಐಜಿಎನ್) ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಮಾತನಾಡಿದರು. ಕಾಯಂ ಸದಸ್ಯತ್ವ ನೀಡಬೇಕು ಎಂಬುದು ಭಾರತದ ಹಲವು ದಶಕಗಳ ಬೇಡಿಕೆಯಾಗಿದೆ.
'ಭದ್ರತಾ ಮಂಡಳಿಯಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಬದಲಾವಣೆಗಳು ಆಗಬೇಕಿದೆ. ಹಳೆಯ ಸ್ವರೂಪಕ್ಕೆ 80 ವರ್ಷ ಕಳೆದಿದೆ. ಈ ಸ್ವರೂಪವು ಈಗಿನ ಕಾಲದ ಬದಲಾದ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಒಗ್ಗುವುದಿಲ್ಲ' ಎಂದರು.

