ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮಾಡುವುದಕ್ಕೆ ಸಂಬಂಧಿದ ಅರ್ಜಿಗಳನ್ನು ಏಕೈಕ ಮಹಿಳಾ ನ್ಯಾಯಮೂರ್ತಿ ನಾಗರತ್ನ ಬಿ.ವಿ. ಸೇರಿದಂತೆ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ಅರ್ಜಿಗಳಲ್ಲಿ ಕೇರಳದ ಶಬರಿಮಲೆ ದೇವಸ್ಥಾನದ ಪ್ರಕರಣವೂ ಸೇರಿದೆ. ಈ ಅರ್ಜಿಗಳು ವಿವಿಧ ಧರ್ಮಗಳು ಅನುಸರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೂಡ ಎತ್ತಿವೆ.
ಈ ಪೀಠದಲ್ಲಿದ್ದ ಇತರ 8 ನ್ಯಾಯಮೂರ್ತಿಗಳೆಂದರೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್, ಏಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಆಗಸ್ಟಿನ್ ಜಾರ್ಜ್ ಮಸೀಹ, ಪ್ರಸನ್ನ ಬಿ. ವರಾಲೆ, ಆರ್. ಮಹಾದೇವನ್ ಹಾಗೂ ಜೋಯ್ಮಲ್ಯ ಬಾಗ್ಚಿ.
ಅರ್ಜಿಗಳ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ನಾಗರತ್ನ ಅವರು, ಶಬರಿಮಲೆ ಸಂದರ್ಭದಲ್ಲಿ ವಿಧಿ 17 ಅನ್ನು ಹೇಗೆ ವಾದಿಸಬಹುದು ಎಂದು ನನಗೆ ತಿಳಿದಿಲ್ಲ. ನಾನು ಮಹಿಳೆಯಾಗಿ ಹೇಳುವುದಾದರೆ, ಪ್ರತಿ ತಿಂಗಳು ಮೂರು ದಿನ ಅಸ್ಪಶರಾಗಿ ಇರುವುದು ಹಾಗೂ ನಾಲ್ಕನೇ ದಿನ ಸ್ಪಶ್ಯರಾಗಿ ಇರುವುದು ಸಾಧ್ಯವಿಲ್ಲ ಎಂದಿದ್ದಾರೆ.
ಈ ಪ್ರಕರಣದಲ್ಲಿ ವಿಧಿ 17 ಅನ್ನು ಅನ್ವಯಿಸುವ ಕುರಿತು ಅನುಮಾನ ವ್ಯಕ್ತಪಡಿಸಿದ ಅವರು, ಭಾರತದ ಜಾತಿ ಆಧಾರಿತ ಅಸ್ಪಶತೆಯ ದೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ವಿಧಿ 17 ಅನ್ನು ಮೂಲಭೂತ ಹಕ್ಕಾಗಿ ಸೇರಿಸಲಾಗಿದೆ ಎಂದರು.
2018ರ ಶಬರಿಮಲೆ ತೀರ್ಪಿನ ಒಂದು ಅಭಿಪ್ರಾಯಕ್ಕೆ ತನ್ನ ತೀವ್ರ ಆಕ್ಷೇಪ ಇದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಪಾದಿಸಿದ ಸಂದರ್ಭ ನ್ಯಾಯಮೂರ್ತಿ ನಾಗರತ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

