HEALTH TIPS

ಯುರೇನಿಯಂ ಒಪ್ಪಿಸದಿದ್ದರೆ ಇರಾನ್‌ ಮೇಲೆ ಮತ್ತೆ ದಾಳಿ ಮಾಡೇ ಮಾಡ್ತೀವಿ: ಅಮೆರಿಕ

 ವಾಷಿಂಗ್ಟನ್: ಇರಾನ್ ತನ್ನ ಬಳಿ ಇರುವ ಯುರೇನಿಯಂ ಅನ್ನು ಹಸ್ತಾಂತರಿಸಬೇಕು, ಇಲ್ಲದಿದ್ದರೆ ಅಮೆರಿಕ ಮತ್ತು ಇಸ್ರೇಲ್‌ನಿಂದ ಮರು ದಾಳಿ ಅಥವಾ ಭೂಸೇನೆ ಕಾರ್ಯಾಚರಣೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್‌ ಎಚ್ಚರಿಸಿದ್ದಾರೆ.


ಇರಾನ್ ತನ್ನ ಸಮೃದ್ಧ ಯುರೇನಿಯಂ ಅನ್ನು ಹಸ್ತಾಂತರಿಸುವಂತೆ ಅಮೆರಿಕ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಗ್ಸೆತ್‌, 'ಇರಾನ್‌ ಸ್ವಯಂಪ್ರೇರಿತವಾಗಿ ಯುರೇನಿಯಂ ಅನ್ನು ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಾವೇ ವಶಪಡಿಸಿಕೊಳ್ಳುತ್ತೇವೆ' ಎಂದಿದ್ದಾರೆ.

'ಕಳೆದ ವರ್ಷ ಇಸ್ರೇಲ್‌ನ 12 ದಿನಗಳ ಯುದ್ಧದ ಸಂದರ್ಭದಲ್ಲಿ ಅಮೆರಿಕ ನಡೆಸಿದ 'ಮಿಡ್‌ನೈಟ್ ಹ್ಯಾಮರ್' ಬಾಂಬ್ ದಾಳಿಯಂತಹ ಕಾರ್ಯಾಚರಣೆ ನಡೆಸುವ ಆಯ್ಕೆಯೂ ನಮ್ಮ ಮುಂದಿದೆ' ಎಂದೂ ಅವರು ಹೇಳಿದ್ದಾರೆ.

ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಬುಧವಾರ ಸಮ್ಮತಿಸಿದ್ದವು. ಇರಾನ್ ಯುರೇನಿಯಂ ಅನ್ನು ಹಸ್ತಾಂತರಿಸಬೇಕು ಎಂದು ಪೀಟ್ ಹೆಗ್ಸೆತ್‌ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತಾಯಿಸಿದ್ದಾರೆ.


'ಇರಾನ್‌ ತನ್ನ ಎಲ್ಲಾ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಒಪ್ಪಂದದ ಮೂಲಕ ದೇಶದಿಂದ ಹೊರಹಾಕಬೇಕು' ಎಂದು ನೆತನ್ಯಾಹು ಆಗ್ರಹಿಸಿದ್ದಾರೆ.

ಒಪ್ಪಂದದ ಗೊಂದಲ: ಕದನ ವಿರಾಮ ಒಪ್ಪಂದದ ಭಾಗವಾಗಿ ಇರಾನ್‌ಗೆ ಯುರೇನಿಯಂ ಸಮೃದ್ಧಗೊಳಿಸಲು ಅವಕಾಶವಿದೆಯೇ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಪರ್ಷಿಯನ್ ಭಾಷೆಯ ಒಪ್ಪಂದದ ಪ್ರತಿಯಲ್ಲಿ 'ಸಮೃದ್ಧಗೊಳಿಸುವಿಕೆಗೆ ಅಂಗೀಕಾರ' ಎಂಬ ಅಂಶವಿದೆ. ಆದರೆ, ಇಂಗ್ಲಿಷ್ ಆವೃತ್ತಿಯಲ್ಲಿ ಅದು ಇಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ಮಾತನಾಡಿ, ಅಮೆರಿಕ ಈ ಹಕ್ಕನ್ನು ನಿರಾಕರಿಸುವ ಮೂಲಕ ಒಪ್ಪಂದ ಉಲ್ಲಂಘಿಸಿದೆ ಎಂದು ದೂರಿದ್ದಾರೆ.

ಇದೇ ವೇಳೆ ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್‌ ಸೋಷಿಯಲ್‌'ನಲ್ಲಿ ಪೋಸ್ಟ್‌ ಮಾಡಿದ್ದು, 'ಇರಾನ್‌ನಲ್ಲಿ ಯಾವುದೇ ಯುರೇನಿಯಂ ಸಮೃದ್ಧಗೊಳಿಸುವಿಕೆ ನಡೆಯುವುದಿಲ್ಲ. ಅಮೆರಿಕವು ಇರಾನ್ ಜೊತೆ ಸೇರಿ ಭೂಮಿಯ ಆಳದಲ್ಲಿ ಹೂತುಹಾಕಲಾದ ಎಲ್ಲಾ ಅಣು ತ್ಯಾಜ್ಯವನ್ನು ಹೊರತೆಗೆಯಲಿದೆ' ಎಂದು ಹೇಳಿದ್ದಾರೆ.

ಭೂಸೇನೆ ಕಾರ್ಯಾಚರಣೆ ಭೀತಿ: ಟ್ರಂಪ್ ಅವರ ಕೋರಿಕೆಯ ಮೇರೆಗೆ ಅಮೆರಿಕದ ಭೂಸೇನೆ ಇರಾನ್‌ನೊಳಗೆ ನುಗ್ಗಿ ಯುರೇನಿಯಂ ದಾಸ್ತಾನುಗಳನ್ನು ವಶಪಡಿಸಿಕೊಳ್ಳುವ ವಿಶೇಷ ಕಾರ್ಯಾಚರಣೆಯ ಯೋಜನೆಯನ್ನು ಸಿದ್ಧಪಡಿಸಿದೆ ಎಂದು 'ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.

ಈ ಯೋಜನೆಯು ಅತ್ಯಂತ ಅಪಾಯಕಾರಿಯಾಗಿದ್ದು, ಸಾವಿರಾರು ಸೈನಿಕರು ರಹಸ್ಯವಾಗಿ ಇರಾನ್ ಒಳಗೆ ಪ್ರವೇಶಿಸಬೇಕಾಗುತ್ತದೆ. ಭೂಗತವಾಗಿರುವ ವಿಕಿರಣಶೀಲ ವಸ್ತುಗಳನ್ನು ಹೊರತೆಗೆಯಲು ರಹಸ್ಯ ರನ್‌ವೇ ನಿರ್ಮಿಸಿ ವಿಮಾನದ ಮೂಲಕ ಸಾಗಿಸಬೇಕಾಗುತ್ತದೆ. ತಜ್ಞರ ಪ್ರಕಾರ ಇದು ಅತ್ಯಂತ ಅವಾಸ್ತವಿಕ ಯೋಜನೆಯಾಗಿದ್ದು, ಪೂರ್ಣಗೊಳ್ಳಲು ವಾರಗಳ ಸಮಯ ಬೇಕಾಗಬಹುದು.

ಹೆಚ್ಚಿದ ಆತಂಕ: ಇಸ್ರೇಲ್ ಬುಧವಾರ ಲೆಬನಾನ್ ಮೇಲೆ ನಡೆಸಿದ ಭೀಕರ ದಾಳಿಯಿಂದಾಗಿ ಕದನ ವಿರಾಮ ಒಪ್ಪಂದವು ಅಳಿವಿನ ಅಂಚಿನಲ್ಲಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎಂದು ವರದಿಯಾಗಿದೆ.

'ಕದನ ವಿರಾಮವೋ ಅಥವಾ ಇಸ್ರೇಲ್ ಮೂಲಕ ಯುದ್ಧವೋ ಎಂಬುದನ್ನು ಅಮೆರಿಕವೇ ನಿರ್ಧರಿಸಲಿ. ಎರಡೂ ಒಟ್ಟಿಗೆ ಸಾಧ್ಯವಿಲ್ಲ. ಈಗ ಚೆಂಡು ಅಮೆರಿಕದ ಅಂಗಳದಲ್ಲಿದೆ' ಎಂದು ಇರಾನ್‌ ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅರಾಗ್ಚಿ ವಾಗ್ದಾಳಿ ನಡೆಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries