ತಿರುವನಂತಪುರ: 'ಮತ ಎಣಿಕೆಯ ಮೊದಲು ಮತಪೆಟ್ಟಿಗೆಗಳನ್ನಿಟ್ಟ ಸ್ಟ್ರಾಂಗ್‌ರೂಂಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು' ಎಂದು ಕೇಂದ್ರ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ಪೆರಂಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬಳಸಲಾಗಿದ್ದ ಇವಿಎಂಗಳನ್ನು ಕೋಯಿಕ್ಕೋಡ್‌ನ ಜೆಡಿಟಿ ಇಸ್ಲಾಂ ಶಾಲೆಯ 'ಸ್ಟ್ರಾಂಗ್ ರೂಂ'ನಲ್ಲಿ ಇರಿಸಲಾಗಿತ್ತು.
ಮತಗಟ್ಟೆ ಅಧಿಕಾರಿಯು ನಿಯಮಗಳನ್ನು ಉಲ್ಲಂಘಿಸಿ ಆ ಕೊಠಡಿಯನ್ನು ತೆರೆದಿದ್ದರು ಎಂದು ಕಾಂಗ್ರೆಸ್ ಸಂಸದ ಎಂ.ಕೆ.ರಾಘವನ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಆರೋಪಿಸಿದ್ದರು. ಪಾಲಕ್ಕಾಡ್‌ನ ನೆನ್‌ಮರಾ ಕ್ಷೇತ್ರದಲ್ಲಿಯೂ ಇದೇ ರೀತಿ ಕೊಠಡಿ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಸ್ಪಷ್ಟ ನಿರ್ದೇಶನ ನೀಡಿದ ಕೇರಳ ರಾಜ್ಯ ಮುಖ್ಯ ಚುನಾವಣಾಧಿಕಾರಿ ರತನ್ ಯು. ಕೇಳ್ಕರ್, 'ಎನ್ಕೋರ್ ಪೋರ್ಟಲ್‌ನಲ್ಲಿ ದತ್ತಾಂಶಗಳ ಪರಿಶೀಲನೆ ಹಾಗೂ ಸೂಚ್ಯಂಕ ಕಾರ್ಡ್‌ಗಳನ್ನು ತಯಾರಿಸುವ ವೇಳೆ ಯಾವುದೇ ಕಾರಣಕ್ಕೂ ಸ್ಟ್ರಾಂಗ್ ರೂಂ ಅಥವಾ ಮೊಹರು ಮಾಡಿದ ಕೊಠಡಿಗಳನ್ನು ತೆರೆಯುವಂತಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಭದ್ರತೆ ಹಾಗೂ ಸಮಗ್ರತೆ ಕಾಪಾಡುವ ದೃಷ್ಟಿಯಿಂದ ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಹೇಳಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೋಯಿಕ್ಕೋಡ್‌ನ ಜಿಲ್ಲಾಧಿಕಾರಿ ಸ್ನೇಹಿಲ್ ಕುಮಾರ್ ಸಿಂಗ್, 'ಯಾವುದೇ ಸ್ಟ್ರಾಂಗ್ ರೂಂ ಅನ್ನು ತೆರೆದಿಲ್ಲ. ಸೀಲ್ ಮಾಡಲಾದ ವಿದ್ಯುನ್ಮಾನ ಮತಪೆಟ್ಟಿಗೆ (ಇವಿಎಂ) ಹಾಗೂ ವಿವಿಪ್ಯಾಟ್‌ಗಳನ್ನು ಕಟ್ಟಡದ ಮೊದಲ ಮಹಡಿಯಲ್ಲಿ ಇಡಲಾಗಿದೆ. ಕೇಂದ್ರಿಯ ವೀಕ್ಷಕರು ಹಾಗೂ ಅಭ್ಯರ್ಥಿಗಳ ಏಜೆಂಟ್‌ಗಳು ಕೂಡ ಈ ಕೊಠಡಿಯನ್ನು ಕಾಯುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

