ಕಾರ್ಗಿಲ್ (PTI): ಪರಿಸರ ಹೋರಾಟಗಾರ ಸೋನಂ ವಾಂಗ್ಚೂಕ್ ಅವರನ್ನು ಕಾರ್ಗಿಲ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಾರಾಗೃಹದಿಂದ ಬಿಡುಗಡೆಯಾದ ಬಳಿಕ ವಾಂಗ್ಚೂಕ್ ಅವರು ಇದೇ ಮೊದಲ ಬಾರಿಗೆ ಕಾರ್ಗಿಲ್‌ಗೆ ಭಾನುವಾರ ಭೇಟಿ ನೀಡಿದರು.
ಇಲ್ಲಿ ಮಾತನಾಡಿದ ವಾಂಗ್ಚೂಕ್ ಅವರು, ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುವ ಬೇಡಿಕೆಯನ್ನು ಪುನರುಚ್ಚರಿಸಿದರು.
ತಮ್ಮ ಬಂಧನದ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ನಾಗರಿಕರು ಹಾಗೂ ಸಂಘಟನೆಗಳಿಗೆ ಧನ್ಯವಾದ ತಿಳಿಸಿದರು. ಲಡಾಖ್ ಮತ್ತು ದೇಶದಾದ್ಯಂತ ಒಗ್ಗಟ್ಟಿಗೆ ಕರೆ ನೀಡಿದರು.
'ಜನರು ಎಲ್ಲಾ ಭೇದಗಳನ್ನು ಮೀರಿ, ಉತ್ತಮ ಭವಿಷ್ಯಕ್ಕಾಗಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಮಾನವೀಯತೆ ಮತ್ತು ಭಾರತೀಯತೆಯ ಭಾವನೆಯಿಂದ ನಾವು ಒಗ್ಗೂಡಬೇಕು. ನಾವು ಶಾಂತಿಪ್ರಿಯರು. ನಮ್ಮ ಪ್ರತಿಭಟನೆ ಯನ್ನು ಯಾವಾಗಲೂ ಶಾಂತಿ ಮತ್ತು ಘನತೆಯಿಂದ ವ್ಯಕ್ತಪಡಿಸಿದ್ದೇವೆ. ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು' ಎಂದರು.
ಲಡಾಖ್‌ಗೆ ರಾಜ್ಯ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸುವ ಆಂದೋಲನವನ್ನು ಮುನ್ನಡೆಸುತ್ತಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ನಿಯೋಗ (ಎಲ್‌ಎಬಿ) ನಾಯಕರನ್ನು ವಾಂಗ್ಚೂಕ್ ಭೇಟಿಯಾದರು.

