HEALTH TIPS

ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ಅಮಿತ್ ಶಾ

ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾಲ್ಡಾ ಜಿಲ್ಲೆಯ ಗಜೋಲ್‌ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, "ಇದು ಭಾರತ; ಇಲ್ಲಿ ಬಾಬರಿ ಮಸೀದಿ ನಿರ್ಮಿಸಲು ಯಾರಿಗೂ ಅವಕಾಶ ಇರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಆಮ್ ಜನತಾ ಉನ್ನಾಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ಬಾಬರಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನೆಲೆ ಶಾ ಈ ಹೇಳಿಕೆ ನೀಡಿದ್ದಾರೆ.

ಕಬೀರ್ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ "ಏಜೆಂಟ್" ಎಂದು ಆರೋಪಿಸಿದ ಅಮಿತ್‌ ಶಾ, "ಅವರು ಬ್ಯಾನರ್ಜಿ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಹೇಳಿದರು. ಈ ಪ್ರಸ್ತಾಪದ ಬಳಿಕ ಕಳೆದ ಡಿಸೆಂಬರ್‌ ನಲ್ಲಿ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

"ಕಬೀರ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿ ಸರಕಾರ ಬಂದರೆ ಇಂತಹ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ" ಎಂದು ಅಮಿತ್‌ ಶಾ ಹೇಳಿದರು.

ಮಾಣಿಕ್‌ ಚಕ್‌ ನಲ್ಲಿ ನಡೆದ ಮತ್ತೊಂದು ರ್ಯಾಲಿಯಲ್ಲಿ, "ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಕನಸುಗಳು ಭಗ್ನಗೊಳ್ಳಲಿವೆ" ಎಂದು ಟೀಕಿಸಿದರು.

ಪಶ್ಚಿಮ ಬಂಗಾಳದಲ್ಲಿ ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.

ಹುಮಾಯೂನ್ ಕಬೀರ್‌ ಅವರು ಕಳೆದ ವರ್ಷ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ 33ನೇ ವಾರ್ಷಿಕೋತ್ಸವದ ಅಂಗವಾಗಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. 86 ಕೋಟಿ ರೂ. ವೆಚ್ಚದಲ್ಲಿ ಎಂಟು ಎಕರೆ ಖಾಸಗಿ ಭೂಮಿಯಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ. ಈ ವಿಷಯ ರಾಜ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಬಿರ್ಭುಮ್ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ನಡೆದ ರ್ಯಾಲಿಗಳಲ್ಲಿಯೂ ಶಾ, "ಮಮತಾ ಬ್ಯಾನರ್ಜಿ ಮತ್ತು ಕಬೀರ್ ಇಬ್ಬರೂ ಒಂದೇ ರೀತಿಯವರು" ಎಂದು ಆರೋಪಿಸಿದ್ದರು. ರಾಣಿಗಂಜ್‌ ನಲ್ಲಿ ನಡೆದ ಸಭೆಯಲ್ಲಿ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರೆಂದು ಆರೋಪಿಸಿ, ಅದನ್ನು ಕಬೀರ್ ಪ್ರಸ್ತಾಪಿಸಿದ ಮಸೀದಿ ನಿರ್ಮಾಣ ಯೋಜನೆಗೆ ಸಂಬಂಧಿಸಿ ಟೀಕಿಸಿದರು.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದವು ಎಂದು ಅಮಿತ್‌ ಶಾ ಹೇಳಿದರು. ಆದರೆ, 2019ರ ಜನಾದೇಶದ ಬಳಿಕ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆ ಎಂದು ಅವರು ಉಲ್ಲೇಖಿಸಿದರು.

ಕಬೀರ್ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು 1,000 ಕೋಟಿ ರೂ. ಒಪ್ಪಂದದಲ್ಲಿ 200 ಕೋಟಿ ರೂಪಾಯಿ ಮುಂಗಡ ಪಡೆದಿದ್ದಾರೆ ಎಂಬ ಆರೋಪಗಳಿರುವ ವೈರಲ್ ವೀಡಿಯೊವನ್ನೂ ಅವರು ಉಲ್ಲೇಖಿಸಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, "ಕಬೀರ್ ಅವರ ಸಿದ್ಧಾಂತಗಳು ಬಿಜೆಪಿಗೆ ಸಂಪೂರ್ಣ ವಿರುದ್ಧ. ಅವರ ಜೊತೆ ಮೈತ್ರಿ ಮಾಡುವುದಕ್ಕಿಂತ ಬಿಜೆಪಿ 20 ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು ಸಿದ್ಧ" ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries