ನವದೆಹಲಿ: ಏಕರೂಪ ನಾಗರಿಕ ಸಂಹಿತೆ, 'ಒಂದು ರಾಷ್ಟ್ರ, ಒಂದು ಚುನಾವಣೆ' ಬಿಜೆಪಿಯ ಎರಡು ಪೂರ್ಣಗೊಳ್ಳದ ಅಜೆಂಡಾಗಳಾಗಿದೆ ಮತ್ತು ಅವುಗಳ ಕುರಿತು ಗಂಭೀರ ಮತ್ತು ಸಕಾರಾತ್ಮಕ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿಯ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು, ಬಿಜೆಪಿ ಕಾರ್ಯಕರ್ತರು ತುರ್ತು ಪರಿಸ್ಥಿತಿ ಮತ್ತು ದಬ್ಬಾಳಿಕೆ ಮುಂತಾದ ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಹಿಂಸೆಯನ್ನು ರಾಜಕೀಯ ಸಂಸ್ಕೃತಿಯಾಗಿ ಪರಿವರ್ತಿಸಲಾಗಿದೆ. ಅಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನಮ್ಮ ಧ್ಯೇಯ ಮುಂದುವರಿದಿದೆ. ಏಕರೂಪ ನಾಗರಿಕ ಸಂಹಿತೆ, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ದೇಶದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಮತ್ತು ನಾವು ಅವುಗಳ ಬಗ್ಗೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆಯು ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಸ್ತಾಪಿಸುತ್ತದೆ. ಏಕರೂಪ ನಾಗರಿಕ ಸಂಹಿತೆ ದೇಶಾದ್ಯಂತ ವಿವಾಹ, ದತ್ತು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಒಂದೇ ರೀತಿಯ ಕಾನೂನುಗಳನ್ನು ರೂಪಿಸುವುದನ್ನು ಸೂಚಿಸುತ್ತದೆ.

