HEALTH TIPS

ದೇಶೀಯ ಪ್ರಯಾಣ ದರಗಳ ಹೆಚ್ಚಳ ತಡೆಯಲು ವಿಮಾನ ಇಂಧನ ಬೆಲೆ ಭಾಗಶಃ ಏರಿಕೆ: ಮಾಹಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾತೈಲ ದರಗಳ ಏರಿಕೆಯ ನಡುವೆ ಭಾರತದಲ್ಲಿ ವಿಮಾನ ಇಂಧನ (ಎಟಿಎಫ್) ಬೆಲೆಯು ಬುಧವಾರ ತೀವ್ರ ಪರಿಷ್ಕರಣೆಯನ್ನು ಕಂಡಿದ್ದರೂ ಸರಕಾರವು ಪ್ರಯಾಣಿಕರನ್ನು ಟಿಕೆಟ್ ಬೆಲೆ ಏರಿಕೆಯಿಂದ ರಕ್ಷಿಸಲು ಮುಂದಾಗಿದೆ.

ಭಾರತೀಯ ತೈಲ ನಿಗಮವು (ಐಒಸಿ) ಬಿಡುಗಡೆಗೊಳಿಸಿದ ಆರಂಭಿಕ ಪ್ರಕಟಣೆಯಂತೆ ಎಟಿಎಫ್ ದರ ದುಪ್ಪಟ್ಟಿಗಿಂತಲೂ ಅಧಿಕ ಏರಿಕೆಯಾಗಿ ಪ್ರತಿ ಕಿಲೋಲೀಟರ್‌ಗೆ 2.07 ಲಕ್ಷ.ರೂ.ಗಳನ್ನು ತಲುಪಿತ್ತು.

ಆದರೆ ಶೀಘ್ರವೇ ದರಗಳನ್ನು ಪರಿಷ್ಕರಿಸಲಾಗಿದ್ದು, ದರ ಏರಿಕೆಯ ಸಂಪೂರ್ಣ ಹೊರೆಯನ್ನು ದೇಶೀಯ ವಿಮಾನಯಾನ ಸಂಸ್ಥೆಗಳು ಭರಿಸುವುದಿಲ್ಲ ಎಂದು ಸರಕಾರವು ಸ್ಪಷ್ಟಪಡಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ ಭಾರತದಲ್ಲಿ ಎಟಿಎಫ್ ದರಗಳು ನಿಯಂತ್ರಣ ಮುಕ್ತವಾಗಿದ್ದು, ಪ್ರತಿ ತಿಂಗಳು ಅಂತರರಾಷ್ಟ್ರೀಯ ಬೆಲೆಗಳನ್ನು ಆಧರಿಸಿ ಪರಿಷ್ಕರಿಸಲಾಗುತ್ತದೆ. ಹಾರ್ಮುಝ್ ಜಲಸಂಧಿಯ ಮುಚ್ಚುವಿಕೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿಯ ಬಿಕ್ಕಟ್ಟಿನ ಸ್ಥಿತಿಯಿಂದಾಗಿ ಎ.1ರಿಂದ ಎಟಿಎಫ್ ದರಗಳಲ್ಲಿ ಶೇ.100ಕ್ಕೂ ಅಧಿಕ ತೀವ್ರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು.

ತೈಲ ಮಾರಾಟ ಕಂಪೆನಿಗಳು ತನ್ನೊಂದಿಗೆ ಸಮಾಲೋಚಿಸಿದ ಬಳಿಕ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸುಮಾರು ಶೇ.25ರಷ್ಟು (ಪ್ರತಿ ಲೀ.ಗೆ ಸುಮಾರು 15 ರೂ.) ಭಾಗಶಃ ಮತ್ತು ಹಂತ ಹಂತವಾಗಿ ಏರಿಕೆಯನ್ನು ಮಾತ್ರ ಜಾರಿಗೊಳಿಸಿವೆ ಎಂದು ಸಚಿವಾಲಯವು ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನಗಳು ವಿಶ್ವದ ಇತರ ಭಾಗಗಳಲ್ಲಿ ಪಾವತಿಸುವ ದರಗಳಿಗೆ ಅನುಗುಣವಾಗಿ ಎಟಿಎಫ್ ದರಗಳ ಸಂಪೂರ್ಣ ಹೆಚ್ಚಳವನ್ನು ಭರಿಸುತ್ತವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಎ.1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರಗಳ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಎಟಿಎಫ್ ದರ ದಿಲ್ಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ ಸುಮಾರು 1.04 ಲ.ರೂ.ಗಳಾಗಿದ್ದರೆ ಕೋಲ್ಕತಾ ಮತ್ತು ಚೆನ್ನೈನಂತಹ ಇತರ ಮಹಾನಗರಗಳಲ್ಲಿ 1.09 ಲ.ರೂ.ಗಿಂತ ಹೆಚ್ಚಿದೆ. ಇದೇ ವೇಳೆ ಮುಂಬೈನಲ್ಲಿ ಎಟಿಎಫ್ ದರ ಪ್ರತಿ ಕಿಲೋಲೀಟರ್‌ಗೆ 98,000 ರೂ.ಆಗಿದೆ.

ಅಂತರರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಬೆಲೆಗಳು ಶೇ.1ಕ್ಕೂ ಅಧಿಕ ಏರಿಕೆಯನ್ನು ಕಂಡಿವೆ. ಕಚ್ಚಾತೈಲ ಬೆಲೆಗಳಲ್ಲಿ ನಿರಂತರ ಏರಿಕೆಯಿಂದಾಗಿ ಎಟಿಎಫ್ ವೆಚ್ಚವೂ ಹೆಚ್ಚಿದೆ.

ಜಾಗತಿಕ ಎಟಿಎಫ್ ದರಗಳು ಒಂದು ತಿಂಗಳಲ್ಲಿ ಸುಮಾರು ದುಪ್ಪಟ್ಟಾಗಿವೆ ಎಂದು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ ದತ್ತಾಂಶಗಳು ತೋರಿಸಿವೆ.

ಎಟಿಎಫ್ ವಿಮಾನಯಾನ ಸಂಸ್ಥೆಗಳ ಹೆಚ್ಚಿನ ವೆಚ್ಚಗಳಲ್ಲೊಂದಾಗಿದ್ದು, ಸಾಮಾನ್ಯವಾಗಿ ನಿರ್ವಹಣಾ ವೆಚ್ಚಗಳ ಶೇ.40ರವರೆಗೆ ಇರುತ್ತದೆ. ಇಂಧನ ಬೆಲೆಗಳು ಏರಿಕೆಯಾದರೆ ನಿರ್ವಹಣಾ ವೆಚ್ಚಗಳೂ ಏರಿಕೆಯಾಗುತ್ತವೆ.

ಪಶ್ಚಿಮ ಏಶ್ಯಾದಲ್ಲಿನ ಬೆಳವಣಿಗೆಗಳನ್ನು ಅವಲಂಬಿಸಿ ಅಗತ್ಯವಾದರೆ ಎಟಿಎಫ್ ಬೆಲೆಗಳನ್ನು ಹಂತಹಂತವಾಗಿ ಹೆಚ್ಚಿಸಬಹುದು ಎಂದು ತೈಲ ಮಾರಾಟ ಕಂಪೆನಿಗಳ ಮೂಲಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಎಟಿಎಫ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಇಳಿಕೆ ಮಾಡುವಂತೆ ನಾಗರಿಕ ವಾಯುಯಾನ ಸಚಿವ ರಾಮಮೋಹನ ನಾಯ್ಡು ಅವರು ರಾಜ್ಯಸರಕಾರಗಳನ್ನು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries