ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಹರಿಯಾಣದ ಐವರು ಕಾಂಗ್ರೆಸ್ ಶಾಸಕರನ್ನು ಉಚ್ಚಾಟಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಾದ ಶೆಲ್ಲಿ ಚೌಧರಿ, ರೇಣು ಬಾಲಾ, ಮೊಹಮ್ಮದ್ ಇಲ್ಯಾಸ್, ಮೊಹಮ್ಮದ್ ಇಸ್ರೇಲ್, ಜರ್ನೈಲ್ ಸಿಂಗ್ ಅವರು ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಇವರ ವಿರುದ್ಧ ಹರಿಯಾಣ ಕಾಂಗ್ರೆಸ್‌ನ ಶಿಸ್ತು ಕ್ರಮ ಸಮಿತಿ ವರದಿ ಸಿದ್ಧಪಡಿಸಿದ್ದು ಶೀಘ್ರದಲ್ಲೇ ಹೈಕಮಾಂಡ್‌ಗೆ ಅಂತಿಮ ನಿರ್ಧಾರವನ್ನು ತಿಳಿಸಲಿದೆ. ಶಿಸ್ತು ಕ್ರಮ ಸಮಿತಿಯು ಶಾಸಕರನ್ನು ಉಚ್ಚಾಟಿಸುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಾಲ್ ಪರವಾಗಿ ಅಡ್ಡ ಮತದಾನ ಮಾಡಿದ ಆರೋಪವಿದೆ.
ಅಡ್ಡ ಮತದಾನ ಮಾಡಿದ ಶಾಸಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇವರು ಕೇವಲ ಪಕ್ಷಕ್ಕೆ ಮಾತ್ರವಲ್ಲ, ತಮಗೆ ಮತ ನೀಡಿದ ಜನರಿಗೂ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಭೂಪಿಂದರ್ ಸಿಂಗ್ ಹುಡಾ ಪ್ರತಿಕ್ರಿಯಿಸಿದ್ದಾರೆ.

