ನಾಸಿಕ್: ಕಾರೊಂದು ನೀರು ತುಂಬಿದ ಬಾವಿಗೆ ಬಿದ್ದ ಪರಿಣಾಮ ಆರು ಮಕ್ಕಳು ಸೇರಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿಯಲ್ಲಿ ನಡೆದಿದೆ.
ಮೃತರು ದಿಂಡೋರಿ ತಾಲ್ಲೂಕಿನ ಇಂದೋರ್ ಗ್ರಾಮದ ದರ್ಗುಡೆ ಕುಟುಂಬದ ಸದಸ್ಯರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಪಕ್ಕದ ಜಮೀನಿನಲ್ಲಿರುವ ಬಾವಿಗೆ ಎರ್ಟಿಗಾ ಕಾರು ಬಿದ್ದಿದೆ. ಸ್ಥಳೀಯ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮಧ್ಯರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಕಾರು ಮತ್ತು ಅದರಲ್ಲಿದ್ದವರನ್ನು ಹೊರೆತೆಗೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಏಳು ವರ್ಷದಿಂದ 14 ವರ್ಷದೊಳಗಿನ ಐವರು ಹೆಣ್ಣು ಮಕ್ಕಳು ಹಾಗೂ 11 ವರ್ಷದ ಒಬ್ಬ ಹುಡುಗ ಇದ್ದನು ಎಂದು ತಿಳಿಸಿದ್ದಾರೆ.

