ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನ ನಿರ್ವಹಿಸುತ್ತಿರುವ ಪಾತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿರುವುದು ಭಾರತಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಭಾರತದ ರಾಜತಾಂತ್ರಿಕ ವ್ಯವಸ್ಥೆಗೆ ಸಂಪೂರ್ಣ ಬದಲಾವಣೆ ಅಗತ್ಯವಿದ್ದು, ಪ್ರಧಾನಿ ಮೋದಿ 'ಅಸಮರ್ಥ'ರಾಗಿದ್ದಾರೆ ಎಂದು ಟೀಕಿಸಿದ್ದಾರೆ.
'ನಮ್ಮ ವಿದ್ವಾಂಸ ಮತ್ತು ಸದಾ ಸುಂದರವಾಗಿ ಉಡುಪು ಧರಿಸುವ ವಿದೇಶಾಂಗ ಸಚಿವರು (ಜೈಶಂಕರ್) ಯಾವ ದೇಶವನ್ನು 'ದಲ್ಲಾಳಿ' ಎಂದು ಕರೆದಿದ್ದರೋ, ಅದೇ ದೇಶವು ಇಂದು ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸುತ್ತಿದೆ' ಎಂದು ಲೇವಡಿ ಮಾಡಿದ್ದಾರೆ.
'ಒಸಾಮ ಬಿನ್ ಲಾಡೆನ್ ಮತ್ತು ಇತರ ಭಯೋತ್ಪಾದಕರಿಗೆ ಆಶ್ರಯ ನೀಡಿದ ನಂತರ, ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದ ಮತ್ತು ಒಂದು ವರ್ಷದ ಹಿಂದೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯನ್ನು ಸಂಘಟಿಸಿದ ನಂತರವೂ ಪಾಕಿಸ್ತಾನವು ಈಗ ಪ್ರಮುಖ ರಾಜತಾಂತ್ರಿಕ ಪಾತ್ರ ನಿರ್ವಹಿಸುತ್ತಿದೆ' ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
'ಪಾಕಿಸ್ತಾನವನ್ನು ಪ್ರತ್ಯೇಕಿಸುವಲ್ಲಿ ಪ್ರಧಾನಿ ಮೋದಿ ಅವರ ಪ್ರಾದೇಶಿಕ, ಜಾಗತಿಕ ಕಾರ್ಯತಂತ್ರ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಕುಮ್ಮಕ್ಕು ನೀಡಿದ್ದ ಪಾಕ್‌ನ ಫೀಲ್ಡ್ ಮಾರ್ಷಲ್ ಮುನೀರ್, ಈಗ ಟ್ರಂಪ್ ಅವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿರುವುದು ಭಾರತಕ್ಕೆ ತೀವ್ರ ಹಿನ್ನಡೆಯಾಗಿದೆ' ಎಂದಿದ್ದಾರೆ.
'ಮುನೀರ್ ಅವರು ಟ್ರಂಪ್ ಕುಟುಂಬ ಮತ್ತು ಸಹಚರರ ವಲಯವನ್ನು ಭಾರತಕ್ಕಿಂತ ಉತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದಂತೆ ತೋರುತ್ತಿದೆ. ಇದು ಮೋದಿ ಅವರ ವಿದೇಶಾಂಗ ನೀತಿಗೆ ಉಂಟಾದ ಬೃಹತ್ ಹಿನ್ನಡೆಯಾಗಿದೆ' ಎಂದು ಕುಟುಕಿದ್ದಾರೆ.
ಇರಾನ್-ಅಮೆರಿಕ ನಡುವಿನ ಸಂಘರ್ಷ ಕೊನೆಗೊಳಿಸುವ ಉದ್ದೇಶದಿಂದ ಏಪ್ರಿಲ್ 11 ಮತ್ತು 12ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಅಪರೂಪದ ನೇರ ಮಾತುಕತೆ ನಡೆದಿತ್ತು. ಆದರೆ, ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯವಾಗಿತ್ತು. ಮಂಗಳವಾರ ಮುಕ್ತಾಯಗೊಳ್ಳಲಿರುವ ಎರಡು ವಾರಗಳ ಕದನ ವಿರಾಮವನ್ನು ವಿಸ್ತರಿಸುವ ಭರವಸೆಯೊಂದಿಗೆ ಟ್ರಂಪ್, ಈಗ ಮತ್ತೊಂದು ಸುತ್ತಿನ ಮಾತುಕತೆ ಘೋಷಿಸಿದ್ದಾರೆ.
ನಮ್ಮ ಪ್ರತಿನಿಧಿಗಳು ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ, ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸದಿರಲು ಇರಾನ್ ತೀರ್ಮಾನಿಸಿದೆ.

